Site icon Harithalekhani

BY Vijayendra| 60,000 ಶಿಕ್ಷಕರ ಹುದ್ದೆಗಳು ಖಾಲಿ; ಸರ್ಕಾರಿ ಶಾಲೆಗಳ ದುಸ್ಥಿತಿಗೆ ಬಿವೈ ವಿಜಯೇಂದ್ರ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇರುವ ಶಾಲೆಗಳು ದೈನೇಸಿ ಪರಿಸ್ಥಿತಿಯಲ್ಲಿವೆ. ಆ ಶಾಲೆಗಳಲ್ಲೂ ಶಿಕ್ಷಕರಿಲ್ಲ. 60,000 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಕನ್ನಡದ ಬಗ್ಗೆ ‘ಮೊಸಳೆ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿಬಿದ್ದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ.

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರ ಅವರ ಭಾಷಣವನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ, ಸರ್ಕಾರದ ಬಳಿ ಏನೇನೂ ಉಳಿದಿಲ್ಲ. ಇವರಿಂದ ಕನ್ನಡ ತನ ಹೇಗೆ ಉಳಿಯಲು ಸಾಧ್ಯ? ಎಂದು ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿರುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರು ಗ್ಯಾರಂಟಿಗಳ ವೈಫಲ್ಯ ಒಪ್ಪಿಕೊಂಡಿದ್ದು, ಕರ್ನಾಟಕವೂ ತೆಲಂಗಾಣ ಹಾದಿಯಲ್ಲಿ ಸಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಮ್ಮ ರಾಜ್ಯದಲ್ಲಿ ಆರು ಗ್ಯಾರಂಟಿಗಳ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಆರ್ಥಿಕವಾಗಿ ಭಾರಿ ಹೊರೆಯಾಗುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೂ ಇಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಠಕ್ಕೆ ಬಿದ್ದು ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Exit mobile version