ದೊಡ್ಡಬಳ್ಳಾಪುರ; ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಘಾಟಿ ಸುಬ್ರಹ್ಮಣ್ಯ (Ghati subramanya temple) ಬ್ರಹ್ಮರಥೋತ್ಸವದ ಅಂಗವಾಗಿ ಭಾರಿ ದನಗಳ ಜಾತ್ರೆಗೆ ಸಿದ್ದತೆ ನಡೆಯುತ್ತಿದ್ದು, ಡಿ.20ರಂದು ದನಗಳ ಜಾತ್ರೆ ಆರಂಭವಾಗಿದೆ.
ವಾರಾಂತ್ಯದ ರಜೆ ಹಾಗೂ ದನಗಳ ಜಾತ್ರೆ ನೋಡಲು ಇಂದು ಜನತೆ ಕ್ಷೇತ್ರಕ್ಕೆ ದೌಡಾಯಿಸಿದ್ದು, ಸುಮಾರು 5 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ.
ವಾಹನ ದಟ್ಟಣೆ ಹೆಚ್ಚಾದ ಕಾರಣ ವಾಹನ ಸವಾರರು, ಸುಮಾರು ಮೂರಕ್ಕು ಹೆಚ್ಚು ಗಂಟೆಗಳಿಂದ ಪರದಾಡುವಂತಾಗಿದೆ.
ಇದೆ ರಸ್ತೆಯಲ್ಲಿ ಸಾಗುತ್ತಿದ್ದ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಹಾಗೂ ಗೆಳೆಯರು ಟ್ರಾಫಿಕ್ ನಿಯಂತ್ರಣಕ್ಕೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದನಗಳ ಜಾತ್ರೆ
ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುವ ಬೆಳೆಗಳ ಕೊಯ್ಲು ಮುಕ್ತಾಯವಾಗುತ್ತಿದ್ದಂತೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಡೆಯುವ ಘಾಟಿಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಹೋರಿಗಳನ್ನು ಖರೀದಿಸಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ರಾಜ್ಯದ ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಾದ ತಮಿಳುನಾಡಿನ ಸೇಲಂ, ಹೊಸೂರು. ಆಂಧ್ರಪ್ರದೇಶದ ಹಿಂದೂಪುರ,ಅನಂತಪುರ. ಮಹಾರಾಷ್ಟ್ರದ ಕೊಲ್ಲಾಪುರ,ಸಾಂಗ್ಲಿ ಸೇರಿದಂತೆ ವಿವಿಧ ಕಡೆಗಳಿಂದಲು ರೈತರು ಬರುತ್ತಾರೆ.
ವಿವಿಧೆಡೆಗಳಿಂದ ದನಗಳ ಜಾತ್ರೆಗೆ ಬರುವ ರೈತರಿಗೆ ದೇವಾಲಯ ಆಡಳಿತ ಮಂಡಳಿ ವತಿಯಿಂದ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಾತ್ರೆಯಲ್ಲಿ ಅಮೃತ ಮಹಲ್, ಹಳ್ಳಿಕಾರ್ ಸೇರಿದಂತೆ ಸ್ಥಳೀಯ ನಾಟಿ ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬರಲಿವೆ.
ಜ.5ರಂದು ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ: ಬ್ರಹ್ಮರಥೋತ್ಸವ ಹಾಗೂ ಜಾತ್ರೆ ಕುರಿತಂತೆ ಜಿಲ್ಲಾಧಿಕಾರಿಗಳ ಸಭೆ ನಡೆದಿದ್ದು, ಡಿ.20 ರಿಂದ 30 ವರೆಗೆ ದನಗಳ ಜಾತ್ರೆಗೆ ವಿವಿಧ ಭಾಗಗಳಿಂದ ಸಾಕಷ್ಟು ಜಾನುವಾರುಗಳು ಆಗಮಿಸಲಿದ್ದು ರಾಸುಗಳಿಗೆ ಕುಡಿಯುವ ನೀರು, ಮೇವು, ಲಸಿಕೆ, ದನಗಳ ಕಟ್ಟಿಹಾಕುವ ಶೆಡ್ ಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ, ರೈತರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.