ಮಂಡ್ಯ: ಸಮಾಜದಲ್ಲಿ ಹಿಂದಿ ಭಾಷೆ ಹೇರಿಕೆ ಯಾವುದೇ ಕಾರಣಕ್ಕೂ ಮಾಡಬಾರದು. ಹಿಂದಿ ಭಾಷೆ ಹೇರಿಕೆ ಮಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು (Sa.Ra.Govindu) ಎಚ್ಚರಿಸಿದರು.
ಕರ್ನಾಟಕ ಚಿತ್ರಣ ಬದಲಿಸಿದ ಚಳವಳಿ ಕುರಿತು ಮಾತನಾಡಿ, ರಾಜ್ಯದ ಚಿತ್ರಣ ಬದಲಿಸುವಲ್ಲಿ ರೈತ ಚಳವಳಿ, ಕನ್ನಡಪರ ಚಳವಳಿ ಹಾಗೂ ದಲಿತ ಚಳವಳಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಗೋಕಾಕ್ ಚಳವಳಿ ಮೂಲಕ ಹೊಸ ಅಲೆ ಸೃಷ್ಟಿ ಮಾಡಿದವರು ಡಾ.ರಾಜ್ ಕುಮಾರ್ ಎಂದರು.
ರಾಜ್ಯದಲ್ಲಿ ಮೂರ್ನಾಲ್ಕು ದಶಕಗಳ ಕಾಲ ಒಂದೇ ಆಡಳಿತ ಇದ್ದ ಸಂದರ್ಭದಲ್ಲಿ ಬದಲಾವಣೆಗೆ ರೈತ, ಕನ್ನಡಪರ ಹಾಗೂ ದಲಿತ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿದ್ದವು. 70 ಮತ್ತು 80ರ ದಶಕದಲ್ಲಿ ಚಳವಳಿಗೆ ಅಂಥ ಶಕ್ತಿಯಿತ್ತು. ಈಗ ಆ ರೀತಿಯ ವಾತಾವರಣ ಇದೆಯೇ ಎಂದು ಪ್ರತಿಯೊಬ್ಬರೂ ಅವಲೋಕಿಸಬೇಕಿದೆ ಎಂದು ಸಾ.ರಾ.ಗೋವಿಂದು ಸ್ಮರಿಸಿದರು.