ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada sahitya sammelana) ಯಶಸ್ವಿಯಾಗಿ ನೆರವೇರಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಶ್ರೀ ಸಿದ್ಧಗಂಗಾಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಿತು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಅತ್ಯಂತ ಅಪ್ಪಟ ಕನ್ನಡ ಭಾಷೆ ಉಳಿದಿದ್ದರೆ ಅದು ಮಂಡ್ಯ ಜಿಲ್ಲೆಯಲ್ಲಿ. ಹಲವು ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಕನ್ನಡ ಭಾಷೆಗೆ ಶಕ್ತಿ ತುಂಬುವ ವಿಚಾರ ಗೋಷ್ಠಿ ನಡೆಸಲಾಗಿದೆ. ನಾನು ಕೇಂದ್ರದ ಮಂತ್ರಿ ಆಗಿ ಇಲ್ಲಿ ನಿಂತಿಲ್ಲ. ನಾಡಿನ ಅಪ್ಪಟ ಕನ್ನಡಿಗನಾಗಿ ಭಾವನೆ ವ್ಯಕ್ತಪಡಿಸಲು ಬಂದಿದ್ದೇನೆ ಎಂದರು.
ನಮ್ಮ ಗ್ರಾಮೀಣ ಪ್ರದೇಶದ ಯುವಕರಿಗೆ ಒಂದು ಸವಾಲಿದೆ. ಒಂದೆಡೆ ಭಾಷೆಗೆ ಪ್ರಾಶಸ್ತ್ಯ ಕೊಡಬೇಕು. ಪ್ರತಿಯೊಂದು ಹಂತದಲ್ಲೂ ನಮ್ಮ ಭಾಷೆ ಮೇಲೆ, ಬೇರೆ ಭಾಷೆಗಳ ಹೇರಿಕೆ ಆಗ್ತಿದೆ. ಪಬ್ಲಿಕ್ ಶಾಲೆಗಳ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ನಾನು ಎರಡನೇ ಬಾರಿಗೆ ಸಿಎಂ ಆದಾಗ ಗ್ರಾಮೀಣ ಮಕ್ಕಳ ಸಮಸ್ಯೆ ಬಗ್ಗೆ ಗಮನಹರಿಸಿದ್ದೆ. ಸರ್ಕಾರಿ ಶಾಲೆಗೆ ಮಕ್ಕಳನ್ನ ಕಳಿಸಲು ಪೋಷಕರು ಆಸಕ್ತಿ ಕಳೆದುಕೊಂಡಿದ್ದಾರೆ. ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು ನಿಜ. ಆದರೆ ನಮ್ಮ ಭಾಷೆ ಕಡೆಗಣನೆ ಸಲ್ಲದು ಎಂದರು.
ದೆಹಲಿಯಲ್ಲಿ ದೊಡ್ಡ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡಬೇಕು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈ ಬಗ್ಗೆ ಗಮನಹರಿಸಬೇಕು. ರಾಜ್ಯ ಸರ್ಕಾರದ ಸಹಕಾರದ ಜೊತೆಗೆ ಅಲ್ಲೂ ಸಮ್ಮೇಳನ ಮಾಡೋಣ ಎಂದರು.
ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ, ಮೂರು ದಿನದ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ. ಅಚ್ಚುಕಟ್ಟಾಗಿ ಸಮ್ಮೇಳನ ನಡೆದಿದೆ. ಇತಿಹಾಸದಲ್ಲಿ ನಮಗೆ ಸಿಕ್ಕಿರೋ ಬಹುದೊಡ್ಡ ಆಸ್ತಿ ಭಾಷೆ. ಈ ಭಾಷೆಯಿಂದ ನಾವು ಸೃಷ್ಟಿಯ ಬೇರೆ ಜೀವಿಗಳಿಗಿಂತ ವಿಭಿನ್ನವಾಗಿದ್ದೇವೆ. ಭಾಷೆಯನ್ನ ಬೆಳೆಸಬೇಕು ಅಂದ್ರೆ ಮೊದಲು ಬಳಸಬೇಕು. ಡಿಜಿಟಲ್ ಯುಗದಲ್ಲೂ ಕನ್ನಡ ಬಳಕೆ ಆಗಬೇಕು.ಕುವೆಂಪು ಆಶಯದಂತೆ ಕನ್ನಡ ಭಾಷೆ, ಭಾವನೆ ಬೆಸೆಯಬೇಕು ಎಂದರು.
ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುರಿತ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷರು, ನಾಡೋಜ ಗೊ.ರು.ಚನ್ನಬಸಪ್ಪ, ಸಾಹಿತ್ಯ, ಸಂಸ್ಕೃತಿ ಸಂಬಂಧ ಸಮಾಜಕ್ಕೆ ದೊರೆತರೆ ವಿಶೇಷ ಪರಿಣಾಮ ಬೀರುತ್ತದೆ. ಇಲ್ಲಿ ಬಹಳ ಸುಗಮವಾಗಿ ಸಮ್ಮೇಳನ ಜರುಗಿದೆ. ಸಾಮಾನ್ಯವಾಗಿ ಊಟ, ವಸತಿ ಬಗ್ಗೆ ದೂರು ಬರುತ್ತವೆ. ಆದರೆ ಇಲ್ಲಿ ಅದ್ಯಾವುದು ಕೇಳಲಿಲ್ಲ. ಸಾಹಿತ್ಯ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರುವುದು ಅಪರೂಪ ಎಂದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಮಾತನಾಡಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ನೆಲ, ಜಲ, ಭಾಷೆ ಉಳಿವಿಗೆ ಸರ್ಕಾರ ಸದಾ ಬದ್ಧ ಎಂದರು.
ಕಳೆದ ಮೂರು ದಿನಗಳಲ್ಲಿ 6 ಲಕ್ಷಕ್ಕೂ ಅಧಿಕ ಜನರು ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಇದಲ್ಲದೇ 18 ದೇಶಗಳಿಂದ 200ಕ್ಕೂ ಅಧಿಕ ಕನ್ನಡ ಪ್ರೇಮಿಗಳು ಆಗಮಿಸಿದ್ದು ವಿಶೇಷ. ಸಮ್ಮೇಳನಾಧ್ಯಕ್ಷರ ಆಯ್ಕೆ, ಗೋಷ್ಠಿ, ಕಾರ್ಯಕ್ರಮಗಳು ಜನರ ಮೆಚ್ಚುಗೆ ಗಳಿಸಿವೆ ಎಂದು ಹೇಳಿದರು.
ಅವಧೂತ ಶ್ರೀ ವಿನಯ ಗುರೂಜಿ, ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಕರ್ನಾಟಕ ವಿಧಾನ ಪರಿಷತ್ ಸನ್ಮಾನ್ಯ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕರಾದ ಪಿ.ರವಿಕುಮಾರ್ ಗಣಿಗ, ಪಿ.ಎಂ.ನರೇಂದ್ರ ಸ್ವಾಮಿ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಮಹೇಶ ಜೋಶಿ, ಜಿಲ್ಲಾ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.