ಬೆಂಗಳೂರು: ನೆಲಮಂಗಲದಲ್ಲಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದು, ಇದೀಗ ಮಹಾರಾಷ್ಟ್ರದ ಜತ್ತ ತಾಲೂಕಿನ ಮೊರಬಗಿ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ನಿನ್ನೆ ಮಧ್ಯಾಹ್ನ ಬೆಂಗಳೂರಿನ ನೆಲಮಂಗಲದ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಕಂಟೇನರ್ ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು
ಮೃತ ದೇಹಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಅಂಬುಲೆನ್ಸ್ ಮೂಲಕ ತಲುಪಿಸಲಾಯಿತು.
ಇದೀಗ ಸ್ವಗ್ರಾಮದಲ್ಲಿ ಎಲ್ಲರ ಸಮ್ಮುಖ ಲಿಂಗಯುತ ಸಮುದಾಯದಂತೆ ಅಂತ್ಯಕ್ರಿಯೆ ನಡೆದಿದ್ದು ಮೃತ ಚಂದ್ರಮ್ ಅವರ ಸಹೋದರ ಅಗ್ನಿಸ್ಪರ್ಶ ಮಾಡಿದ್ದಾರೆ.
ಸ್ವಗ್ರಾಮ ನೀರವ ಮೌನ ಆವರಿಸಿದೆ.
ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!
ಲಾರಿಗಳ ನಡುವಿನ ಅಪಘಾತದ ನಂತರ ಕಂಟೇನರ್ವೊಂದು ಡಿವೈಡರ್ ಹಾರಿ ಕಾರಿನ ಮೇಲೆ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ (Accident) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿತ್ತು.
ಅಪಘಾತದಲ್ಲಿ ಇಬ್ಬರು ಮಕ್ಕಳು, ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು.
ವಿಜಯಪುರದ ಉದ್ಯಮಿ 48 ವರ್ಷದ ಚಂದ್ರ ಯಾವಪ್ಪವೋಳ, 16 ವರ್ಷದ ಜಾನ್, 12 ವರ್ಷದ ದೀಕ್ಷಾ, 36 ವರ್ಷದ ವಿಜಯ ಲಕ್ಷ್ಮಿ, 42 ವರ್ಷದ ಗೌರಬಾಯಿ, 6 ವರ್ಷದ ಆರ್ಯ ಮೃತ ದುರ್ದೈವಿಗಳು.
ಟಿ.ಬೇಗೂರು ಬಳಿ ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿತ್ತು.
ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಕಾರಿನ ಮೇಲೆ ಕಂಟೇನರ್ ಬಿದ್ದಿದ್ದರಿಂದ ಅದರಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಮಗು ಸೇರಿ ಒಟ್ಟು 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಂಟೇನರ್ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಅದರಲ್ಲಿದ್ದ ಮೃತದೇಹಗಳು ಕೂಡ ಛಿದ್ರವಾಗಿವೆ. ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ನೆಲಮಂಗಲ ಪೊಲೀಸರ ಭೇಟಿ ನೀಡಿ, ಕ್ರೇನ್ ಬಳಸಿ ಮೃತದೇಹಗಳನ್ನು ಕಾರಿನಿಂದ ಹೊರತೆಗೆಯಲಾಗಿತ್ತು.