ಮಂಡ್ಯ: ಮುಂದಿನ ವರ್ಷ ನಡೆಯುವ 2025ರಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Kannada sahitya sammelana) ಆಯೋಜಿಸಲು ಹಲವು ಜಿಲ್ಲೆಗಳು ತೀವ್ರ ಪೈಪೋಟಿ ನಡೆಸಿ ದ್ದರೂ ಅಂತಿಮವಾಗಿ ಗಡಿನಾಡು ಬಳ್ಳಾರಿಗೆ ಆಯೋಜಕತ್ವದ ಅವಕಾಶ ಲಭಿಸಿದೆ.
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳಿದ ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಮತ್ತು ಕನ್ನಡಾಭಿಮಾನಿಗಳು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಸಬೇಕೆಂದು ಒತ್ತಾಯಿಸಿದರು. ಆದರೆ ಇದಕ್ಕೆ ಯಾವುದೇ ಮನ್ನಣೆ ದೊರೆತಿಲ್ಲ.
ಕಳೆದ ಬಾರಿ ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನದಲ್ಲಿ ಕೂಡ ಇದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಸಬೇಕೆಂದು ಹಕ್ಕೊತ್ತಾಯ ಮಾಡಲಾಗಿತ್ತು. ಆದರೆ ಫಲಿತಾಂಶ ಶೂನ್ಯ.
ಕೇವಲ ಸಾಹಿತ್ಯ ಸಮ್ಮೇಳನ ನಡೆಯುವ ಕಾರ್ಯಕ್ರಮದ ಹೊರಭಾಗದಲ್ಲಿ ಬೋರ್ಡ್ ಹಿಡಿದು ಪೋಟೋ ತೆಗೆಸುವುದ ಬಿಟ್ಟು, ವೇದಿಕೆಯ ಬಳಿ ತೆರಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅವಕಾಶ ನೀಡಬೇಕೆಂದು ಗಟ್ಟಿ ದನಿಯಲ್ಲಿ ಹಕ್ಕೊತ್ತಾಯ ಮಾಡಬೇಕೆಂಬ ಕೂಗು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಹಿತ್ಯಾಭಿಮಾನಿಗಳದ್ದಾಗಿದೆ.
ಜೊತೆಗೆ ಚಿಕ್ಕಮಗಳೂರು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆತಿಥ್ಯಕ್ಕೆ ಆಸಕ್ತಿ ತೋರಿದ್ದರು. ಅಂತಿಮವಾಗಿ ಗಡಿನಾಡು ಜಿಲ್ಲೆಯಾದ ಬಳ್ಳಾರಿ ಸೂಕ್ತ ಎಂಬ ನಿರ್ಣಯಕ್ಕೆ ಬರಲಾಗಿದೆ.