ದೊಡ್ಡಬಳ್ಳಾಪುರ (Doddaballapura): ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಕಾರಣ ನ್ಯಾಯಾಲಯದ ಆದೇಶದ ಅನ್ವಯ, ತೀವ್ರ ಪ್ರತಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ (ನಗರದ ಕೆಲವೆಡೆ) ರಸ್ತೆ ಬದಿಯ ಗೂಡಂಗಡಿಗಳನ್ನು ತೆರವು ಮಾಡಲಾಯಿತು.
ಆದರೆ ಗೂಡಂಗಡಿಗಳು ತೆರವಾದ ಈ ರಸ್ತೆ ಬದಿ ಬೃಹತ್ ಲಾರಿಗಳು, ಜೆಸಿಬಿಗಳು ನಿಂತು ಮತ್ತದೆ ಪಾದಚಾರಿಗಳಿಗೆ, ಸಣ್ಣಪುಟ್ಟ ವಾಹನ ಸವಾರರಿಗೆ ತೊಂದರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಕುರಿತಂತೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್ ಅವರಿಗೆ ಮನವಿ ಪತ್ರವನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಆರ್.ರಮೇಶ್ ರವರು ಮಾತನಾಡಿ, ಜಿ ರಾಮೇಗೌಡ ಭವನದ ಸಮೀಪದಲ್ಲಿರುವ ಹಾಲಿನ ಡೈರಿ ಮುಂಬಾಗ ಹಾಗೂ ಎಪಿಎಂಸಿ ಮಾರುಕಟ್ಟೆ ಮುಂಭಾಗದ ರಸ್ತೆಯ ಪಕ್ಕದಲ್ಲಿ ಜೆಸಿಬಿ ಹಾಗೂ ದೊಡ್ಡ ದೊಡ್ಡ ಲಾರಿಗಳನ್ನು ನಿಲ್ಲಿಸಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೂ ಹಾಗೂ ಪಾದಾಚಾರಿಗಳಿಗೂ ತುಂಬಾ ತೊಂದರೆಯಾಗುತ್ತಿದೆ. ಈ ಕುರಿತು ಆಯುಕ್ತರು ಗಮನ ಹರಿಸಿ, ಲಾರಿ ಮತ್ತು ಜೆಸಿಬಿಗಳ ಅನಧಿಕೃತ ನಿಲುಗಡೆ ತೆರವು ಮಾಡುವಂತೆ ಮನವಿ ಮಾಡಿದರು.
ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನಗರಾಧ್ಯಕ್ಷರಾದ ವಿನಯ್ ಕುಮಾರ್, ಸದಸ್ಯರಾದ ಅಶ್ವಥ್ ನಾರಾಯಣ್ ಇದ್ದರು.