ದೊಡ್ಡಬಳ್ಳಾಪುರ: ತಾಲ್ಲೂಕಿನ ಮಧುರೆ ಹೋಬಳಿ ಕಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Government school) ತೆರಳಲು ದಾರಿ ಇಲ್ಲದ ಕಾರಣ, ಶಾಲೆಗೆ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೀದಿಯಲ್ಲಿ ನಿಲ್ಲುವಂತಾಗಿದ್ದ ವರದಿ ಕುರಿತು ಅಧಿಕಾರಿಗಳು ಎಚ್ಚೆತ್ತಿದ್ದು, ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ.
ಜಮೀನು ವಿವಾದದ ಕಾರಣದಿಂದ ಶಾಲೆಗೆ ದಾರಿ ಇಲ್ಲವಾಗಿದ್ದು, ಕಳೆದ ಮೇ ತಿಂಗಳಲ್ಲಿ ಸಮಸ್ಯೆ ಆರಂಭವಾದಾಗ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ಖಾಸಗಿಯವರ ಮನೆಯ ಸಮೀಪದಿಂದ ಶಾಲೆಗೆ ಸಾಗಲು ಅವಕಾಶ ಕಲ್ಪಿಸಿದ್ದರು. ಆದರೆ ಶಾಶ್ವತ ಪರಿಹಾರವನ್ನು ಮರೆತು ಬಿಟ್ಟಿದ್ದರು.
ಆದರೆ ಇಂದು ಬೆಳಗ್ಗೆ ಖಾಸಗಿ ಮನೆಯವರು ಗೇಟಿಗೆ ಬೀಗ ಹಾಕಿ ತೆರಳಿದ್ದು, ಶಾಲೆಗೆ ಬಂದ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಿತ್ತು.
ಸಮಸ್ಯೆ ಆರಂಭವಾಗಿ ವರ್ಷ ಕಳೆದರು ಇತ್ಯರ್ಥಕ್ಕೆ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಖಾಸಗಿ ಶಾಲೆಗೆ ಮಕ್ಕಳನ್ನು ಕಳಿಸುವ ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರೊ ಶಾಲೆಯ ಮಕ್ಕಳ ಕಷ್ಟ ಅರಿವಾಗುತ್ತಿಲ್ಲ ಎಂದು ಕಿಡಿಕಾರಿದ್ದರು.
ಈ ಕುರಿತು ವರದಿ ಪ್ರಕಟವಾಗಿ ತಾಲೂಕಿನಾಧ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ.
ಸ್ಥಳಕ್ಕೆ ಆರ್ಐ ವೇದ ಮೂರ್ತಿ, ವಿಎ ಚಂದ್ರಕಲಾ, ಪಿಡಿಒ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿದ್ದು, ಜೆಸಿಬಿ ಬಳಸಿ ರಾಜಕಾಲುವೆ ಮೂಲಕ ಶಾಲೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ.
ಅಲ್ಲದೆ ಒತ್ತುವರಿ ಮಾಡಿರುವ ಜಮೀನುಗಳನ್ನು ತೆರವುಗೊಳಿಸಿ, ಮಕ್ಕಳು ಶಾಲೆಗೆ ತೆರಳಲು ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.