ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada sahitya sammelana) ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಅತಿಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ಹೆಮ್ಮೆ. ದಿಟ್ಟತನ, ಔದಾರ್ಯ, ಆತಿಥ್ಯ, ಮತೀಯ ಬಾಂಧವ್ಯ, ಸ್ನೇಹ ಪ್ರೀತಿಗೆ ಮಂಡ್ಯ ಹೆಸರುವಾಸಿ ಎಂದರು.
ಈಗಾಗಲೇ ಎರಡು ಸಾಹಿತ್ಯ ಸಮ್ಮೇಳನ ಇಲ್ಲಿ ನಡೆದಿದ್ದು ಇದು ಮೂರನೇ ಸಮ್ಮೇಳನ. ಕರ್ನಾಟಕ ಎಂದು ನಾಮಕರಣ ಆದ ನಂತರ ಮೊದಲ ಸಮ್ಮೇಳನ ನಡೆದಿದ್ದು ಮಂಡ್ಯದಲ್ಲಿ ಅನ್ನೋದು ಮತ್ತೊಂದು ವಿಶೇಷ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನ ಎಂದರೆ ನಾಡು, ನುಡಿ, ಸೊಬಗು ಸೂಸುವ ಸಂಭ್ರಮದ ಜಾತ್ರೆ. ಸಮಸ್ತ ಕನ್ನಡಿಗರು ಒಂದೆಡೆ ಸೇರಿ ಚರ್ಚಿಸುವ ವೇದಿಕೆ. ಕನ್ನಡ ನಾಡಿನ ಹಿರಿಮೆ ಎತ್ತಿಹಿಡಿಯುವ ಕೆಲಸ ಸಾಹಿತ್ಯ ಸಮ್ಮೇಳನದ ಮೂಲಕ ಮಾಡಬೇಕಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಕ್ಷೀಣಿಸುತ್ತಿರುವುದು ನಿಜಕ್ಕೂ ಬೇಸರ. ಕನ್ನಡ ಭಾಷೆ ಸಂಕಷ್ಟದಲ್ಲಿದೆ. ಮಕ್ಕಳಲ್ಲಿ ಕನ್ನಡ ಕಲಿಕೆ ಆಸಕ್ತಿ ಕುಸಿಯುತ್ತಿದೆ. ಇದಕ್ಕೆ ಕಾರಣ ಕನ್ನಡ ಅನ್ನದ ಭಾಷೆ ಆಗದಿರುವುದು. ಭಾಷೆ ಉಳಿದರೆ ಸಂಸ್ಕೃತಿ ಉಳಿದಂತೆ ಎಂದರು.