ದೊಡ್ಡಬಳ್ಳಾಪುರ: ತಾಲ್ಲೂಕಿನ ಮಧುರೆ ಹೋಬಳಿ ಕಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Government school) ತೆರಳಲು ದಾರಿ ಇಲ್ಲದ ಕಾರಣ, ಶಾಲೆಗೆ ಬಂದು ಬೀದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳು, ಇಲಾಖೆ ಅಧಿಕಾರಿಗಳ ಸೂಚನೆಯ ಮೇರೆಗೆ ಶಿಕ್ಷಕರು ಗ್ರಾಮದ ದೇವಾಲಯದ ಆವರಣದಲ್ಲಿ ಮಕ್ಕಳನ್ನು ಕೂರಿಸಿ, ಪಾಠ ಮಾಡುತ್ತಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಮಕ್ಕಳಿಗೆ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶಿಕ್ಷಣ ನೀಡಲು ಅಧಿಕಾರಿಗಳು, ಚುನಾಯಿತ ಜನಪ್ರತಿನಿದಿಗಳು ವಿಫಲರಾಗಿದ್ದು, ಅವರ ಬೇಜವಬ್ದಾರಿ ಎಷ್ಟಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಒಂದು ವರ್ಷದಿಂದ ಮಕ್ಕಳಿಗೆ ಸಮಸ್ಯೆ ಇರುವುದು ತಿಳಿದಿದ್ದರು, ಬಗೆ ಹರಿಸಲು ಮುಂದಾಗದೆ, ಸಂಕಟ ಬಂದಾಗ ವೆಂಕಟರಮಣ ಎಂಬಂತೆ ತಾತ್ಕಾಲಿಕ ಪರಿಹಾರಕ್ಕೆ ಮುಂದಾಗವುದು ಖಂಡನೀಯ.
ಕೂಡಲೇ ಸರ್ಕಾರಿ ಶಾಲೆ ಮಕ್ಕಳಿಗೆ ಸೂಕ್ತ ಶಿಕ್ಷಣ ದೊರಕಿಸಲು ಕ್ರಮಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮಕ್ಕಳನ್ನು ಕರೆತಂದು ಪಾಠ ಮಾಡುವಂತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಮೀನು ವಿವಾದದ ಕಾರಣದಿಂದ ಕಮ್ಮಸಂದ್ರ ಶಾಲೆಗೆ ದಾರಿ ಇಲ್ಲವಾಗಿದ್ದು, ಕಳೆದ ಮೇ ತಿಂಗಳಲ್ಲಿ ಸಮಸ್ಯೆ ಆರಂಭವಾದಾಗ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ಖಾಸಗಿಯವರ ಮನೆಯ ಸಮೀಪದಿಂದ ಶಾಲೆಗೆ ಸಾಗಲು ಅವಕಾಶ ಕಲ್ಪಿಸಿದ್ದರು. ಆದರೆ ಶಾಶ್ವತ ಪರಿಹಾರವನ್ನು ಮರೆತು ಬಿಟ್ಟಿದ್ದಾರೆ ಎಂಬುದು ಸ್ಥಳೀಯರ ಆಕ್ರೋಶ.
ಆದರೆ ಇಂದು ಖಾಸಗಿ ಮನೆಯವರು ಗೇಟಿಗೆ ಬೀಗ ಹಾಕಿ ತೆರಳಿದ್ದು, ಶಾಲೆಗೆ ಬಂದ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಿತ್ತು.