ಬೆಂಗಳೂರು ಗ್ರಾಮಾಂತರ ಜಿಲ್ಲೆ: ಉತ್ತಮ ಆಡಳಿತ ಸಪ್ತಾಹ-2024 ರ ಅಂಗವಾಗಿ “ಇಂದೇ ಸಕಾಲ”ದಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಅನುಮೋದಿಸಿ ಜಿಲ್ಲಾಧಿಕಾರಿಗಳಿಂದ (DC) ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಉತ್ತಮ ಆಡಳಿತ ಸಪ್ತಾಹ-2024 ವು 19.12.2024 ರಿಂದ 24.12.2024 ರವರೆಗೆ ನಡೆಯಲಿದೆ. “ಪ್ರಶಾಸನ್ ಗಾಂವ್ ಕಿ ಓರೆ(ಗ್ರಾಮದ ಕಡೆಗೆ ಆಡಳಿತ)” ಎಂಬ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಸಾರ್ವಜನಿಕ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೇವನಹಳ್ಳಿ ತಾಲ್ಲೂಕಿನ ಕೊಯಿರಾ ಗ್ರಾಮದ ಗಾಂಧಿವಾದಿ ಹಾಗೂ ಪರಿಸರ ಸಂರಕ್ಷಕರಾದ ಕೆ.ಎಸ್ ಕೃಷ್ಣಪ್ಪ ಹಾಗೂ ದೊಡ್ಡಬಳ್ಳಾಪುರ ನಗರದ ನಿವೃತ್ತ ಶಿಕ್ಷರಾದ ಎಸ್.ಎಸ್ ರಾಜೇಂದ್ರ ಅವರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ಹಿರಿಯ ನಾಗರಿಕರು “ಇಂದೇ ಸಕಾಲ” ವಿಶೇಷ ಯೋಜನೆಯಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಪಡೆದು ವಿನೂತನ ಕಾರ್ಯಕ್ರಮದ ಸೌಲಭ್ಯಗಳನ್ನು ಪಡೆಯಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ ಎನ್.ಎಂ, ಇಲಾಖೆಯ ಸಿಬ್ಬಂದಿ ರವಿಕುಮಾರ್, ಪ್ರಸನ್ನ ಮತ್ತು ಸಮಾಜಕಾರ್ಯ ಪ್ರಶಿಕ್ಷಣಾರ್ಥಿ ಮನೋಜ್ ಬಿ.ಹೆಚ್ ಉಪಸ್ಥಿತರಿದ್ದರು.