ದೊಡ್ಡಬಳ್ಳಾಪುರ: ತಾಲ್ಲೂಕಿನ ಮಧುರೆ ಹೋಬಳಿ ಕಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Government school) ತೆರಳಲು ದಾರಿ ಇಲ್ಲದ ಕಾರಣ, ಶಾಲೆಗೆ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೀದಿಯಲ್ಲಿ ನಿಲ್ಲುವಂತಾಗಿದೆ.
ಜಮೀನು ವಿವಾದದ ಕಾರಣದಿಂದ ಶಾಲೆಗೆ ದಾರಿ ಇಲ್ಲವಾಗಿದ್ದು, ಕಳೆದ ಮೇ ತಿಂಗಳಲ್ಲಿ ಸಮಸ್ಯೆ ಆರಂಭವಾದಾಗ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ಖಾಸಗಿಯವರ ಮನೆಯ ಸಮೀಪದಿಂದ ಶಾಲೆಗೆ ಸಾಗಲು ಅವಕಾಶ ಕಲ್ಪಿಸಿದ್ದರು. ಆದರೆ ಶಾಶ್ವತ ಪರಿಹಾರವನ್ನು ಮರೆತು ಬಿಟ್ಟಿದ್ದರು.
ಆದರೆ ಇಂದು ಖಾಸಗಿ ಮನೆಯವರು ಗೇಟಿಗೆ ಬೀಗ ಹಾಕಿ ತೆರಳಿದ್ದು, ಶಾಲೆಗೆ ಬಂದ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಿದೆ.
ಮಕ್ಕಳಿಗೆ ಈ ಸಮಸ್ಯೆ ಆರಂಭವಾಗಿ ವರ್ಷ ಕಳೆದರು ಇತ್ಯರ್ಥಕ್ಕೆ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವ ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ಶಾಲೆಯ ಮಕ್ಕಳ ಕಷ್ಟ ಅರಿವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಬಿಇಒ ಸಯದ್ ಅನ್ನಿಸಾ ಮುಜಾವರ್ ಪ್ರತಿಕ್ರಿಯೆ ನೀಡಿದ್ದು, ಶಾಲೆಗೆ ದಾರಿ ಸಮಸ್ಯೆ ಕುರಿತು ತಹಶಿಲ್ದಾರ್ ಗಮನಕ್ಕೆ ತರಲಾಗಿದೆ. ಸರ್ಕಾರಿ ಜಾಗ ಮಂಜೂರು ಮಾಡಿದರೆ ಶಾಲೆ ಕಟ್ಟಡ ನೂತವಾಗಿ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹರಿಸಲು ಇಲಾಖೆ ಸಿದ್ದವಿದೆ. ಇಂದು ಮಕ್ಕಳಿಗೆ ತೊಂದರೆಯಾಗದಂತೆ ಕ್ರಮವಹಿಸಲು ಮುಂದಾಗಿದ್ದೇವೆ ಎಂದರು.