Site icon Harithalekhani

ಗಾಯಗೊಂಡ ಸಿಟಿ ರವಿ; ನಡು ರಸ್ತೆಯಲ್ಲಿ ಪ್ರತಿಭಟನೆ| CT Ravi Video

ಬೆಳಗಾವಿ: ವಿಧಾನಪರಿಷತ್ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಅಶ್ಲೀಲ ಪದ ಬಳಸಿ ನಿಂದಿಸಿದ ಆರೋಪದ ಮೇರೆಗೆ ವಶಕ್ಕೆ ಪಡೆದ ಪೊಲೀಸರು ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರನ್ನು ಗುರುವಾರ ತಡರಾತ್ರಿಯೇ ಬೆಂಗಳೂರಿಗೆ ಕರೆದೊಯ್ದರು.

ತಡರಾತ್ರಿ ಠಾಣೆಯಿಂದ ಅವರನ್ನು ಪೊಲೀಸರು ಹೊತ್ತು ತಂದರು. ಅವರ ತಲೆಗೆ ಪೆಟ್ಟಾಗಿ, ರಕ್ತ ಸೋರಿದ ಗಾಯಗಳು ಕಂಡವು ಎಂದು ವರದಿಯಾಗಿದೆ. ಆದರೆ, ಅವರಿಗೆ ಯಾವ ರೀತಿಯ ಪೆಟ್ಟು ಬಿದ್ದಿದೆ ಎಂಬುದು ಗೊತ್ತಾಗಿಲ್ಲ.

https://www.harithalekhani.com/wp-content/uploads/2024/12/1000748448.mp4

ರವಿ ಅವರು ಬೆಂಗಳೂರಿಗೆ ಹೊರಡಲು ಸಿದ್ಧರಿಲ್ಲದ ಕಾರಣ ಪೊಲೀಸರು ಹೆಗಲ ಮೇಲೆ ಹೊತ್ತುಕೊಂಡು ಬಂದರು. ಪೊಲೀಸ್‌ ಜೀಪಿನ ಕಿಟಕಿಯಿಂದಲೇ ಅವರ ದೇಹವನ್ನು ವಾಹನದೊಳಗೆ ತೂರಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಟಿ ರವಿ, ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ.

ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೇಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಕೊಲೆ ಯತ್ನ, 26ರಂದು ಬಂದ್

ಸಿಟಿ ರವಿ ಅವರನ್ನು ಹೊತ್ತ ವಾಹನ ಬೆಂಗಳೂರಿನತ್ತ ಸಾಗಿದ ಬಳಿಕ ಆ‌ರ್.ಅಶೋಕ ಮಾತನಾಡಿ, ರವಿ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಎಫ್‌ಐಆ‌ರ್ ದಾಖಲಿಸಿಲ್ಲ. ಬದಲಾಗಿ, ಠಾಣೆಯಲ್ಲೇ ಅವರನ್ನು ಹೊಡೆದು ತಲೆ ಒಡೆದಿದ್ದಾರೆ ಎಂದು ಆರೋಪಿಸಿದರು.

ಈ ಕೃತ್ಯ ಖಂಡಿಸಿ ಶುಕ್ರವಾರ ಚಿಕ್ಕಮಂಗಳೂರು ಬಂದ್‌ ಕರೆ ನೀಡಲಾಗಿದೆ. ಡಿ.26ರಂದು ಬೆಳಗಾವಿ ಬಂದ್‌ ಮಾಡಲಾಗುವುದು. ರಾಜ್ಯದಾದ್ಯಂತ ದೊಡ್ಡ ಹೋರಾಟ ನಡೆಯಲಿದೆ ಎಂದು ಅಶೋಕ ಹೇಳಿದರು.

ಸಿಟಿ ರವಿ ಪ್ರತಿದೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸದನದಲ್ಲೇ ನನಗೆ ‘ಕೊಲೆಗಡುಕ’ ಎಂದು ನಿಂದನೆ ಮಾಡಿದ್ದಾರೆ. ಅವರ ಬೆಂಬಲಿಗರನ್ನು ಸುವರ್ಣ ಸೌಧಕ್ಕೆ ನುಗ್ಗಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ’ ಎಂದು ಆರೋಪಿಸಿ, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಕೂಡ ಪ್ರತಿ ದೂರು ದಾಖಲಿಸಿದ್ದಾರೆ.

ಖಾನಾಪುರ ಪಟ್ಟಣ ಠಾಣೆಯಲ್ಲಿ ಗುರುವಾರ ರಾತ್ರಿ ಅವರು ತಮ್ಮ ದೂರು ದಾಖಲಿಸಿದರು. ‘ಅಶ್ಲೀಲ’ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ಲಕ್ಷ್ಮಿ ಹೆಬ್ಬಾಳಕರ ಅವರು ಹಿರೇಬಾಗೇವಾಡಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸಿ.ಟಿ. ರವಿ ಅವರನ್ನು ವಶಕ್ಕೆ ಪಡೆದ ಹಿರೇಬಾಗೇವಾಡಿ ಪೊಲೀಸರು, ಸುರಕ್ಷತೆಯ ದೃಷ್ಟಿಯಿಂದ ಖಾನಾಪುರ ಠಾಣೆಗೆ ಕರೆತಂದರು.

ವಿಪಕ್ಷ ನಾಯಕ ಆ‌ರ್.ಅಶೋಕ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠಲ ಹಲಗೇಕರ, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಹಾಗೂ ಮಾಜಿ ಶಾಸಕ ಅಂಜಯ ಪಾಟೀಲ ಅವರೂ ತಡರಾತ್ರಿಯವರೆಗೂ ಠಾಣೆಯಲ್ಲೇ ಬೀಡು ಬಿಟ್ಟರು.

ರಾತ್ರಿ 10ರ ನಂತರ ವಕೀಲರನ್ನು ಕರೆಸಿ, ಸಿ.ಟಿ ರವಿ ಅವರ ದೂರನ್ನು ಬರೆಸಿದರು.

Exit mobile version