ಬೆಳಗಾವಿ: ಸುವರ್ಣಸೌಧದ ಪರಿಷತ್ ಕಲಾಪದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರು ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ಆರೋಪ ಕೋಲಾಹಲವನ್ನೇ ಎಬ್ಬಿಸಿದೆ.
ಕಲಾಪವು ವಿರಾಮದ ನಂತರ ಆರಂಭವಾಗುತ್ತಿದ್ದಂತೆ ಆಡಳಿತ ರೂಢ ಪಕ್ಷದ ಸದಸ್ಯರು ಸಿಟಿ ರವಿ ವಿರುದ್ಧ ಸಭಾಂಗಣದಲ್ಲಿ ಮುಗಿಬಿದ್ದರು.
ಭಾರತ್ ಮಾತಾಕಿ ಜೈ ಎನ್ನುವ ನೈತಿಕತೆ ನಿಮಗಿಲ್ಲ. ನಿಮಗೆ ಹೆಂಡತಿ, ತಾಯಿ ಮಗಳು ಇಲ್ವೇನ್ರಿ ಎಂದು ಸಿಟಿ ರವಿ, ಬಿಜೆಪಿ ಸದಸ್ಯರ ವಿರುದ್ಧ ಹೆಬ್ಬಾಳ್ಕರ್ ಗುಡುಗಿದರು. ಆಡಳಿತ ಪಕ್ಷದ ಹಾಗೂ ವಿಪಕ್ಷ ನಾಯಕರ ಗದ್ದಲ, ವಾಕ್ಸಮರ ಕಾವು ಮತ್ತೆ ತೀವ್ರಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.
ಇದಕ್ಕೂ ಮುನ್ನ ಆಡಳಿತರೂಢ ಸದಸ್ಯರು ರವಿ ಅವರು ಕೆಟ್ಟ ಪದಬಳಕೆ ಮಾಡಿದ್ದಾರೆಂದು ಹಾಗೂ ವಿರೋಧ ಪಕ್ಷದ ಸದಸ್ಯರು ಇಲ್ಲ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಎರಡೂ ಪಕ್ಷದ ಸದಸ್ಯರಿಂದ ಆರೋಪ-ಪ್ರತ್ಯಾರೋಪ ದೂರುಗಳು ಬಂದಿವೆ.
ಘಟನೆ ಬಗ್ಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಭಾಪತಿಗಳು ಸಲಹೆ ನೀಡಿದರು. ಇನ್ನು ಪೊಲೀಸ್ ಭದ್ರತೆಯಲ್ಲಿ ಸಿಟಿ ರವಿ ಅವರು ಸದನದಿಂದ ಇದೇ ವೇಳೆ ಹೊರ ನಡೆದರು.
ಪ್ರಕರಣ ದಾಖಲು; ಸದನದೊಳಗೆ ಅಶ್ಲೀಲ ಪದ ಬಳಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇಲೆಗೆ ಬಿಜೆಪಿ ಎಂಎಲ್ಸಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅವಾಚ್ಯಪದ ಬಳಕೆ ಆರೋಪದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮದೇ ಲೆಟರ್‌ಹೆಡ್ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ಬರೆದುಕೊಟ್ಟಿದ್ದಾರೆ. ಈ ದೂರಿನ ಮೇರೆಗೆ ಇದೀಗ ಸಿಟಿ ರವಿ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೀಗಾಗಿ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ.
ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಕೇಸ್ ದಾಖಲಾಗಿದ್ದು. ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.
ಹಲ್ಲೆ ಯತ್ನ; ಯಾವಾಗ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ವಿರುದ್ಧ ಸಿಡಿದೆದ್ದಿದ್ದು, ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ಸುವರ್ಣ ಸೌಧಕ್ಕೆ ನುಗ್ಗಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.