ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿಯೊಂದು ರಸ್ತೆ ಬದಿಯಲ್ಲಿದ್ದ ವೈನ್ಸ್‌ಗೆ ನುಗ್ಗಿರುವ ಘಟನೆ (Accident) ಬುಧವಾರ ರಾತ್ರಿ ನಗರದ ಡಿಕ್ರಾಸ್ ಬಳಿ ಸಂಭವಿಸಿದೆ.
ಡಿಕ್ರಾಸ್ ಬಳಿಯ ಜಿಪಿ ವೈನ್ಸ್ ಸಿಬ್ಬಂದಿಗಳು ಅಂಗಡಿ ಬಾಗಿಲು ಬಂದ್ ಮಾಡಿ ಊಟಕ್ಕೆ ಕುಳಿತಿದ್ದ ವೇಳೆ ಏಕಾಏಕಿ ಬಂದ ಕಂಟೈನರ್ ಲಾರಿ ವೈನ್ಸ್ಗೆ ನುಗ್ಗಿದೆ. ದೊಡ್ಡ ಶಬ್ದ ಕೇಳಿ ಬಂದ ಕಾರಣ ಊಟಕ್ಕೆ ಕುಳಿತಿದ್ದ ಸಿಬ್ಬಂದಿಗಳು ಹಿಂಭಾಗಿಲಿನಿಂದ ಹೊರಬಂದು ನೋಡಿದಾಗ ಕಂಟೈನರ್ ಡಿಕ್ಕಿ ಹೊಡೆದಿರುವುದು ಕಂಡು ಬಂದಿದೆ.
ಅದೃಷ್ಟವಶಾತ್ ಘಟೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ವೈನ್ಸ್ ಮಳಿಗೆ ಕಟ್ಟಡ ಹಾಗೂ ಕಂಟೈನರ್ ಲಾರಿ ಜಖಂಗೊಂಡಿದ್ದು, ಕೆಲ ವೈನ್ ಬಾಟಲ್ಗಳು ಒಡೆದು ಹೋಗಿವೆ.
ಬುಧವಾರ ರಾತ್ರಿ 11.30 ರ ಸುಮಾರಿಗೆ ದಾಬಸ್‌ಪೇಟೆ ಕಡೆಯಿಂದ ಬೆಂಗಳೂರಿನ ಪ್ರೀತಂ ಶೋರೂಂಗೆ ಕಾರ್‌ಗಳನ್ನು ತುಂಬಿಕೊಂಡು ಎರಡು ಕಂಟೈನರ್ ಲಾರಿಗಳು ಡಿಕ್ರಾಸ್ ಮೂಲಕ ತೆರಳುತ್ತಿದ್ದ ವೇಳೆ, ವೃತ್ತದ ಬಳಿ ಅಳವಡಿಸಿರುವ ವೇಗ ನಿಯಂತ್ರಕ (ಸ್ಪೀಡ್ ಬ್ರೇಕರ್) ಕಂಡು ಮುಂದೆ ಸಾಗುತ್ತಿದ್ದ ಕಂಟೈನರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ.
ಇದರಿಂದ ಹಿಂದೆ ಬರುತ್ತಿದ್ದ ಕಂಟೈನರ್ ಚಾಲಕ ಮುಂದೆ ಸಾಗುತ್ತಿದ್ದ ಕಂಟೈನರ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಎಡಕ್ಕೆ ಸ್ಟೇರಿಂಗ್ ಎಳೆದ ಕಾರಣ ನಿಯಂತ್ರಣ ತಪ್ಪಿದ ಕಂಟೈನರ್, ವೈನ್ಸ್ ಗೆ ನುಗ್ಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ ಕಂಟೈನರ್ ಚಾಲಕ ಉದಯ್ ಬಾನು ಶುಕ್ಲ ಬ್ರೇಕ್ ಫೇಲ್ ಆಗಿ, ಅಪಘಾತ ಸಂಭವಿಸಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆಂದು ತಿಳಿದು ಬಂದಿದೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಚಾಲಕನ ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.