Site icon ಹರಿತಲೇಖನಿ

ಹರಿತಲೇಖನಿ ದಿನಕ್ಕೊಂದು ಕಥೆ: ನರಿಯ ಉಪಾಯ| Daily Story

Daily Story: ಗುಡುಗು, ಮಿಂಚು ಸಹಿತ ಜೋರಾಗಿ ಮಳೆ ಒಸುರಿಯಲಾರಂಭಿಸಿತು. ಇದರಿಂದಾಗಿ ಹಳ್ಳಕೊಳ್ಳಗಳು, ಕಾಲುವೆಗಳು ಎಲ್ಲಾ ತುಂಬಿ ಹರಿದು ನದಿ ಸೇರುತ್ತಿದ್ದಂತೆಯೇ ಪ್ರವಾಹ ಉಂಟಾಯಿತು.

ರಭಸದಿಂದ ಹರಿಯುತ್ತಿದ್ದ ದೊಡ್ಡ ಕಾಲುವೆಯೊಂದರಲ್ಲಿ ನರಿಯೊಂದು ಸಿಕ್ಕಿಹಾಕಿಕೊಂಡಿತು. ಹರಸಾಹಸಪಟ್ಟರೂ ಆ ನರಿಗೆ ಕಾಲುವೆಯಿಂದ ಪಾರಾಗಿ ಬರಲು ಸಾಧ್ಯವಾಗದೇ ತೇಲುತ್ತ ಸಾಗಿತ್ತು.

ಹಾಗೆ ಅದು ಸಾಗುತ್ತಿರುವಾಗ ಹಳ್ಳಿಯ ಜನರು ಕಾಲುವೆಯ ಪಕ್ಕ ನಡೆದುಕೊಂಡು ಹೋಗುತ್ತಿರುವುದು ಕಾಣಿಸಿತು.

ನರಿ ಅವರನ್ನು ಕುರಿತು ‘ಈಗ ಜಗತ್ತಿನಲ್ಲಿ ಪ್ರಳಯವಾಗುತ್ತದೆ ಜೋಕೆ’ ಎಂದು ಹೇಳಿತು. ಆ ಹಳ್ಳಿಯ ಜನರು ಮುಗ್ಧರು. ಅವರು ನರಿ ಹೇಳಿದ್ದನ್ನು ಕೇಳಿ ಹೆದರಿಕೆಯಿಂದ ‘ಪ್ರಳಯ ಎಂದರೇನು? ಅದು ಯಾವಾಗ ಸಂಭವಿಸುತ್ತದೆ? ಅದರಿಂದ ಪಾರಾಗುವುದು ಹೇಗೆ?’ ಎಂದೆಲ್ಲಾ ಪ್ರಶ್ನಿಸಿದರು.

ನರಿಯು ‘ಮೊದಲು ನನ್ನನ್ನು ಈ ಪ್ರವಾಹದಿಂದ ಪಾರು ಮಾಡಿ ಆನಂತರ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ’ ಎಂದಿತು. ಆಗ ಆ ಹಳ್ಳಿಯ ಕೆಲವು ಧೈರ್ಯವಂತ ಜನರು ಸಾಹಸದಿಂದ ನರಿಯನ್ನು ಆ ಕಾಲುವೆಯಿಂದ ಪಾರು ಮಾಡಿ ದಡಕ್ಕೆ ತಂದು ಬಿಟ್ಟರು.

ಹಳ್ಳಿಯ ಜನರು ನರಿಯನ್ನು ಕುರಿತು ‘ಈಗ ಹೇಳು! ಪ್ರಳಯ ಎಂದರೇನು? ಅದು ಎಂದಾಗುತ್ತದೆ?’ ಎಂದು ಪ್ರಶ್ನಿಸಿದರು.

ನರಿ ‘ಹೆದರಬೇಡಿ! ಸದ್ಯಕ್ಕೆ ಪ್ರಳಯವಾಗುವುದಿಲ್ಲ’ ಎನ್ನುತ್ತ ಯಾರ ಕೈಗೂ ಸಿಗದೆ ಓಡಿ ಹೋಯಿತು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

Exit mobile version