ದೆಹಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸದನದಲ್ಲಿ ಮಾತಾನಾಡುವ ವೇಳೆ ಅಮಿತ್ ಶಾ ಅವರು, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್. ಇಷ್ಟು ಸಲ ದೇವರ ನಾಮಸ್ಮರಣೆ ಮಾಡಿದ್ದರೆ ಏಳೇಳು ಜನ್ಮಕ್ಕೂ ಸ್ವರ್ಗಕ್ಕೆ ಹೋಗುತ್ತಿದ್ದರು ಎಂದು ಲೇವಡಿ ರೀತಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಕುರಿತ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಸಂಸದರು ಸಂಸತ್ತಿನ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದುಕೊಂಡು ಸಂಸತ್ತಿನ ಹೊರಗೆ ಸಂಸದರು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಡಿಎಂಕೆ, ಆರ್‌ಜೆಡಿ, ಎಡಪಕ್ಷಗಳು ಹಾಗೂ ಆಪ್ ಸೇರಿದಂತೆ ವಿವಿಧ ಪಕ್ಷಗಳು ಸಂಸದರು ಭಾಗವಹಿಸಿದ್ದರು.
ರಾಜ್ಯಸಭೆಯಲ್ಲಿ ಮಧ್ಯಾಹ್ನ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಸಭಾತ್ಯಾಗ ಮಾಡಿತ್ತು.
ಪ್ರತಿಭಟನೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಅಮಿತ್ ರಾಜೀನಾಮೆ ಪಡೆಯುವಂತೆ ಮನವಿ ಮಾಡಿದರು.
ಟಿಎಂಸಿ ಹಕ್ಕುಚ್ಯುತಿ ನೋಟಿಸ್: ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಯಾನ್ ಅವರು ಹಕ್ಕು ಚ್ಯುತಿ ನೋಟಿಸ್ ನೀಡಿದ್ದಾರೆ.
ಅಮಿತ್ ಶಾ ಹೇಳಿಕೆ ಹಾಗೂ ಅವರು ಹೇಳಿದ ರೀತಿ ಎರಡೂ ಅವಮಾನಕಾರಿಯಾಗಿತ್ತು ಎಂದು ಬುಧವಾರ ಮಧ್ಯಾಹ್ನದ ಬಳಿಕ ನೀಡಿರುವ ಹಕ್ಕುಚ್ಯುತಿ ನೋಟಿಸ್‌ನಲ್ಲಿ ಹೇಳಲಾಗಿದೆ.
ದಿಢೀರ್ ಸುದ್ದಿಗೋಷ್ಠಿ: ಅಮಿತ್ ಶಾ ಹೇಳಿಕೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಅಮಿತ್ ಶಾ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು, ನನ್ನ ಹೇಳಿಕೆಯನ್ನು ಕಾಂಗ್ರೆಸ್ ತಿರುಚುತ್ತಿದೆ ಎಂದು ದೂರಿದ್ದಾರೆ.
ಅಂಬೇಡ್ಕರ್ ಅವರಿಗೆ ಎಂದಿಗೂ ಅವಮಾನ ಮಾಡದ ಪಕ್ಷದಿಂದ ನಾನು ಬಂದಿದ್ದೇನೆ. ಸಮಾಜದಲ್ಲಿ ಗೊಂದಲ ಮೂಡಿಸಲು ಮತ್ತು ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಈ ಹಿಂದೆಯೂ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ತಿರುಚಿತ್ತು ಎಂದು ಹೇಳಿದರು.
ಪ್ರಧಾನಿ ಮೋದಿ ಸಮರ್ಥನೆ: ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿರುವ ಪ್ರಧಾನಿ ಮೋದಿ, ಸಂವಿಧಾನ ಶಿಲ್ಪಿಯನ್ನು ಸದಾ ಅವಮಾನಿಸುತ್ತಲೇ ಇರುವ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಗೃಹ ಸಚಿವರು ಬಹಿರಂಗಪಡಿಸಿದ್ದಾರೆ.
ಶಾ ಹೇಳಿದ ಸತ್ಯಗಳಿಂದ ಕಾಂಗ್ರೆಸ್‌ನವರು ಸ್ಪಷ್ಟವಾಗಿ ದಿಗ್ದಮೆ ಗೊಂಡಿದ್ದಾರೆ. ಅದಕ್ಕಾಗಿಯೇ ಈಗ ಡ್ರಾಮಾ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಕಿಡಿ: ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿ ರುವ ಸಂಸತ್ ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದಿದ್ದೀರಿ. ಆದರೆ ವಾಸ್ತವವಾಗಿ ನಿಮ್ಮ ಪಕ್ಷದವರು ಮೋದಿ..ಮೋದಿ..ಮೋದಿ ಎಂದು ಹೇಳುವುದು ಒಂದು ವ್ಯಸನ ಆಗಿದೆ.
ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮ ಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರ ಅಲ್ಲ, ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು ಎಂದು ಸಿಎಂ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ.