Daily story: ಒಮ್ಮೆ ರಾಜನೊಬ್ಬನಿಗೆ ತನ್ನ ರಾಜ್ಯದಲ್ಲಿ ಎಲ್ಲರೂ ಪ್ರಾಮಾಣಿಕರೇ, ಅಲ್ಲವೇ ಬ ಎಂಬುದನ್ನು ಪರೀಕ್ಷಿಸಬೇಕೆಂಬ ಮನಸ್ಸಾಯಿತು.
ಆತ ಮಂತ್ರಿಯನ್ನು ಕರೆದು ‘ಮಂತ್ರಿಗಳೇ, ನಮ್ಮ ಪ್ರಜೆಗಳಲ್ಲಿ ಎಷ್ಟು ಮಂದಿ ಪ್ರಾಮಾಣಿಕರಿದ್ದಾರೆ ಎಂದು ತಿಳಿದುಕೊಳ್ಳಬೇಕೆನಿಸುತ್ತಿದೆ. ಅವರ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಪರೀಕ್ಷೆಯೊಂದನ್ನು ಏರ್ಪಡಿಸಿ’ ಎಂದರು.
ಮಂತ್ರಿ ಸರಿಯೆಂದು ಒಪ್ಪಿಕೊಂಡ. ಆ ದಿನವೇ ರಾಜ್ಯದಲ್ಲಿ ಡಂಗುರ ಸಾರಿ, ‘ನಾಳೆ ಸಂಜೆ ಕುಲದೈವಕ್ಕೆ ಹಾಲಿನ ಅಭಿಷೇಕ ಮಾಡಿಸಬೇಕೆಂದು ಮಹಾರಾಜರು ನಿರ್ಧರಿಸಿದ್ದಾರೆ. ಆದ್ದರಿಂದ ಪ್ರತಿ ಮನೆಯವರೂ ಆ ಸಮಾರಂಭದಲ್ಲಿ ಭಾಗವಹಿಸತಕ್ಕದ್ದು ಮತ್ತು ದೇವರ ಅಭಿಷೇಕಕ್ಕಾಗಿ ಎಲ್ಲರೂ ಹಾಲನ್ನು ದಾನವಾಗಿ ನೀಡತಕ್ಕದ್ದು. ನಾಳೆ ಬೆಳಗ್ಗೆ ದೇವಸ್ಥಾನದ ಹೊರಗೆ ದೊಡ್ಡ ಪಾತ್ರೆಯೊಂದನ್ನು ಇಡಲಾಗುವುದು. ಪ್ರತಿ ಮನೆಯವರೂ ಆ ಪಾತ್ರೆಯಲ್ಲಿ ಹಾಲು ಹಾಕಿ ಹೋಗಬೇಕು’ ಎಂದು ಅಪ್ಪಣೆ ಹೊರಡಿಸಿದ.
ರಾಜನಿಂದ ಅಪ್ಪಣೆ ಬಂದ ಮೇಲೆ ಮುಗಿಯಿತು. ಆದರೆ ಯಾರಿಗೂ ಪಾತ್ರೆಯಲ್ಲಿ ಹಾಲು ಹಾಕಿ ಬರಲು ಇಷ್ಟವಿಲ್ಲ. ಮರುದಿನ ಬೆಳ್ಳಂಬೆಳಗ್ಗೆ ಒಬ್ಬೊಬ್ಬರೇ ಹಾಲನ್ನು ತೆಗೆದುಕೊಂಡು ಬಂದು ದೇವಸ್ಥಾನದ ಎದುರಿದ್ದ ಪಾತ್ರೆಗೆ ಸುರಿಯತೊಡಗಿದರು.
ಸರಿಯಾಗಿ ಬೆಳಕಾಗುವ ಮುಂಚೆಯೇ ಆ ಪಾತ್ರೆ ತುಂಬಿತು. ಮಧ್ಯಾಹ್ನದ ವೇಳೆಗೆ ರಾಜ ತನ್ನ ಮಂತ್ರಿಯೊಂದಿಗೆ ಬಂದ. ಆ ದೊಡ್ಡ ಪಾತ್ರೆಯೊಳಗೆ ಇಣುಕಿ ನೋಡಿದರೆ ಅದರಲ್ಲಿದ್ದದ್ದು ಬರೀ ನೀರು! ಆ ಪಾತ್ರೆಯಲ್ಲಿ ಯಾರೂ ಹಾಲು ಸುರಿದಿರಲಿಲ್ಲ.
ಅಯ್ಯೋ ನಾನೊಬ್ಬ ನೀರು ಹಾಕಿದರೆ ಯಾರಿಗೇನು ಗೊತ್ತಾಗುತ್ತದೆ ಎಂದು ಯೋಚಿಸಿ, ಎಲ್ಲರೂ ಬೆಳಗಾಗುವ ಮುಂಚೆ ಬಂದು ಪಾತ್ರೆಗೆ ನೀರು ಸುರಿದು ಹೋಗಿದ್ದರು. ರಾಜನಿಗೆ ಇದರಿಂದ ಬಹಳ ಬೇಸರವಾಯಿತು.
‘ಏನಿದು ಮಂತ್ರಿಗಳೇ ಇದರಲ್ಲಿ ಬರೀ ನೀರಿದೆಯಲ್ಲ’ ಎಂದರು.
‘ಮಹಾರಾಜ, ಇದು ನಮ್ಮ ಪ್ರಜೆಗಳ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ನಮ್ಮ ರಾಜ್ಯದಲ್ಲಿ ತಲೆದೋರುವ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೂ ಈ ಮನಸ್ಥಿತಿಯೇ. ‘ಅಯ್ಯೋ ನಾನೊಬ್ಬ ಪಾತ್ರೆಯಲ್ಲಿ ನೀರು ಹಾಕಿದರೆ ಯಾರಿಗೆ ಗೊತ್ತಾಗುತ್ತದೆ’, ‘ನಾನೊಬ್ಬ ತಪ್ಪು ಮಾಡಿದರೆ ಏನಾಗುತ್ತದೆ’, ‘ನಾನೊಬ್ಬ ಕಪ್ಪ ಕಾಣಿಕೆ ಒಪ್ಪಿಸದಿದ್ದರೇನು’? ಎಂದು ಜನರು ಯೋಚಿಸುತ್ತಾರೆ.
ತಮ್ಮನ್ನು ಯಾರಾದರು ಗಮನಿಸುತ್ತಿದ್ದಾರೆ ಎಂದಾದರೆ ನಮ್ಮಲ್ಲಿ ಎಲ್ಲರೂ ಪ್ರಾಮಾಣಿಕರೇ. ಆದರೆ ನಿಜವಾದ ಪ್ರಾಮಾಣಿಕತೆಯೆಂದರೆ ಆತ್ಮಸಾಕ್ಷಿಗೆ ಮೋಸ ಮಾಡದೇ ಇರುವುದು’ ಎಂದ ಮಹಾಮಂತ್ರಿ.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)