Site icon Harithalekhani

ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನ| Tulsi Gowda

ಕಾರವಾರ: ಗಿಡಗಳ ಆರೈಕೆ ಕಾರಣಕ್ಕೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಅಂಕೋಲಾ ತಾಲೂಕು ಹೊನ್ನಳ್ಳಿಯ ತುಳಸಿ ಗೌಡ (Tulsi Gowda) ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕೆಲ ತಿಂಗಳುಗಳಿಂದ ಅವರು ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೃತರಿಗೆ ಒಬ್ಬ ಪುತ್ರ, ಪುತ್ರಿ ಇದ್ದಾರೆ. ಜೀವನಾಧಾರಕ್ಕೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ ತುಳಸಿ ಗೌಡ ಅವರು ಗಿಡಗಳ ಆರೈಕೆಗೆ ಜೀವನ ಮುಡಿಪಿಟ್ಟಿದ್ದರು.

ನಿವೃತ್ತಿ ಬಳಿಕವೂ ಸಸಿಗಳನ್ನು ನೆಡುವ, ಪೋಷಿಸುವ ಕೆಲಸ ಮಾಡಿದ್ದರು. ಈವರೆಗೆ ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಅವರು ಬೆಳೆಸಿದ್ದಾರೆ. 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಲಾಗಿತ್ತು. 2020ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. 2022ರಲ್ಲಿ ಅದನ್ನು ಪ್ರದಾನ ಮಾಡಲಾಗಿತ್ತು.

ಈ ಕುರಿತು ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ಲಕ್ಷಾಂತರ ಗಿಡಗಳನ್ನು ನೆಟ್ಟು, ನೀರೆರೆದ ಅಂಕೋಲಾ ತಾಲ್ಲೂಕು ಹೊನ್ನಳ್ಳಿಯ ಪರಿಸರಪ್ರೇಮಿ ತುಳಸಿಗೌಡ ಅವರ ನಿಧನದಿಂದ ದುಃಖಿತನಾಗಿದ್ದೇನೆ.

ಜೀವನ ನಿರ್ವಹಣೆಗಾಗಿ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ್ದ ತುಳಸಿಗೌಡ ಅವರು ನಿವೃತ್ತಿಯ ನಂತರವೂ ತಮ್ಮ ಪರಿಸರ ಕಾಳಜಿಯಿಂದ ವಿಮುಖರಾಗದೆ ಗಿಡನೆಡುವುದನ್ನು ಮುಂದುವರೆಸಿ, ಪದ್ಮಶ್ರೀಯಂತಹ ಅತ್ಯುನ್ನತ ಗೌರವಕ್ಕೆ ಪಾತ್ರರಾದವರು.

ತುಳಸಿಗೌಡ ಅವರ ಪರಿಸರದ ಬಗೆಗಿನ ಪ್ರೀತಿ – ಕಾಳಜಿಯನ್ನು ಸ್ಮರಿಸುತ್ತ, ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದಿದ್ದಾರೆ.

Exit mobile version