ದೊಡ್ಡಬಳ್ಳಾಪುರ: ತಾಲೂಕಿನ ಆರೂಢಿ ಗ್ರಾಮದ ಹೊರವಲಯದಲ್ಲಿ ಇಂದು (ಮಂಗಳವಾರ) ಬೆಳಗ್ಗೆ ಚಿರತೆ (Leopard) ಕಂಡು ಬಂದಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ ಆರೂಢಿ ಗ್ರಾಮದ ಹೊರವಲಯದಲ್ಲಿರುವ (ಹಳೇ ರಸ್ತೆ) ಜಮೀನಿನಲ್ಲಿ ಬೆಳೆದಿರುವ ಸುಕಂದರಾಜ ಹೂ ಬಿಡಿಸಲು ದ್ವಿಚಕ್ರ ವಾಹನದಲ್ಲಿ ತೆರಳಿದ ರೈತನೋರ್ವನಿಗೆ ಏಕಾಏಕಿ ಚಿರತೆ ಎದುರಾಗಿದೆ. ಈ ವೇಳೆ ದ್ವಿಚಕ್ರ ವಾಹನವನ್ನು ತಿರುಗಿಸಿಕೊಳ್ಳಲಾಗದೆ ಅಲ್ಲಿಯೇ ಬಿಟ್ಟು ಸ್ಥಳದಿಂದ ಓಡಿಬಂದಿದ್ದಾರೆ.
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಗ್ರಾಮಸ್ಥರು ಮಾಹಿತಿ ನೀಡಿದ್ದು, ವಿಷಯ ತಿಳಿದ ಸಾಸಲು ಹೋಬಳಿ ವಲಯ ಅರಣ್ಯಾಧಿಕಾರಿ ಷೇಕ್ ಔಲಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಯುವ ಮುಖಂಡ ಕೆಂಪರಾಜ್, ಕಳೆದ ಕೆಲ ದಿನಗಳಿಂದ ಜಕ್ಕೇನಹಳ್ಳಿ, ಆರೂಢಿ, ವಡ್ಡರಹಳ್ಳಿ, ಅಮಲಗುಂಟೆ, ಗರಿಕೇನಹಳ್ಳಿ, ಬನವತಿ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ದಾಬಸ್‌ಪೇಟೆ ವ್ಯಾಪ್ತಿಯಲ್ಲಿ ಮಹಿಳೆಯೋರ್ವರ ರುಂಡ ಭಕ್ಷಿಸಿದ ಘಟನೆಯಿಂದಾಗಿ ಗ್ರಾಮಸ್ಥರು ಭೀತಿಗೆ ಒಳಾಗಿದ್ದಾರೆ. ಇದೇ ಮೊದಲ ಬಾರಿಗೆ ಆರೂಢಿ ವ್ಯಾಪ್ತಿಯಲ್ಲಿ ಚಿರತೆ ಕಂಡು ಬಂದಿರುವುದು ಕಳವಳಕಾರಿಯಾಗಿದೆ. ಕೂಡಲೇ ಚಿರತೆ ಸೆರೆ ಹಿಡಿಯಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿ ಷೇಕ್ ಔಲಿ, ಚಿರತೆ ಓಡಾಟದ ಕುರಿತು ಮಾಹಿತಿ ಕೇಳಿ ಬಂದಿದೆ. ಮತ್ತೆ ಕಂಡು ಬಂದಲ್ಲಿ ಚಿರತೆ ಸೆರೆಗೆ ಬೋನ್ ಅಳವಡಿಸುವುದಾಗಿ ತಿಳಿಸಿದರು.
( ಸಾಂದರ್ಭಿಕ ಚಿತ್ರ ಬಳಸಲಾಗಿದೆ)