ದೊಡ್ಡಬಳ್ಳಾಪುರ: ತಾಲ್ಲೂಕಿನ ಹಿರಿಯ ರಾಜಕಾರಣಿ ದಿವಂಗತ ಆರ್.ಎಲ್.ಜಾಲಪ್ಪ ಅವರ ಹಿರಿಯ ಪುತ್ರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ (j narasimha swamy) ಭಾನುವಾರ ಬೆಳಿಗ್ಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ,ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಹಾಗೂ ರಾಜ್ಯ ಕೊಳಚೆ ನಿರ್ಮೂಲನ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2008 ರಲ್ಲಿ ಅಪರೇಷನ್ ಕಲಮದಿಂದ ಬಿಜೆಪಿಗೆ ಸೇರ್ಪಡೆಗೊಂಡು ಉಪಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯ ಕೊಳಚೆ ನಿರ್ಮೂಲನ ಮಂಡಳಿಯ ಅಧ್ಯಕ್ಷರಾಗಿದ್ದರು.
2013 ಹಾಗೂ 2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋಲುಕಂಡಿದ್ದರು.
ಮೃತರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.
ಅಂತಿಮ ನಮನಕ್ಕೆ ಅವಕಾಶ
ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರಿಗೆ ಅಂತಿಮ ನಮನ ಸಲ್ಲಿಸಲು ನಗರದ ಎರಡು ಕಡೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆರ್.ಎಲ್.ಜಾಲಪ್ಪ ವಿದ್ಯಾಸಂಸ್ಥೆಯ ಎಇಇ ರಮೇಶ್ ಅವರು ನೀಡಿರುವ ಮಾಹಿತಿ ಅನ್ವಯ, ಇಂದು (ಭಾನುವಾರ) ಮಧ್ಯಾಹ್ನ 12 ಗಂಟೆಗೆ ದೊಡ್ಡಬಳ್ಳಾಪುರದ ರೈಲ್ವೇ ಸ್ಟೇಷನ್ ಬಳಿ ಹಾಗೂ 12.15 ಕ್ಕೆ ಟಿಬಿ ವೃತ್ತದಲ್ಲಿ ಅಂತಿಮ ನಮನ ಸಲ್ಲಿಸಬಹುದಾಗಿದೆ.
ಬಳಿಕ ತೂಬಗೆರೆ ಸ್ವಗೃಹದ ಬಳಿ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸಂಜೆ ನಾಲ್ಕು ಗಂಟೆಯ ಬಳಿಕ ತೂಬಗೆರೆಯ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜೆ.ನರಸಿಂಹಸ್ವಾಮಿ ಅವರ ಅಗಲಿಕೆಗೆ ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಹಿರಿಯ ಮುಖಂಡ ಹರೀಶ್ ಗೌಡ, ಬಮೂಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್‌ಎಸ್ ಅಶ್ವಥ್ ನಾರಾಯಣ ಕುಮಾರ್, ನಗರಸಭೆ ಸದಸ್ಯ ಉಪಾಧ್ಯಕ್ಷ ಮಲ್ಲೇಶ್, ಹೆಚ್.ಎಸ್.ಶಿವಶಂಕರ್, ಶಿವು, ತಾಪಂ ಮಾಜಿ ಅಧ್ಯಕ್ಷ ಡಿಸಿ ಶಶಿಧರ್, ಕರವೇ ರಾಜಘಟ್ಟರವಿ, ಬಿಎಸ್ ಚಂದ್ರಶೇಖರ್, ಹಮಾಮ್ ವೆಂಕಟೇಶ್, ಲಾವಣ್ಯ ನಾಗರಾಜ್, ರಾಮಕೃಷ್ಣಪ್ಪ, ಶಾಂತಿನಗರ ಪ್ರವೀಣ್ ಸಂತಾಪ ಸೂಚಿಸಿದ್ದಾರೆ.