ದೊಡ್ಡಬಳ್ಳಾಪುರ (Doddaballapura): ಹನುಮ ಜಯಂತಿ ದಿನದಂದೇ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಕಾಣಿಕೆ ಹುಂಡಿ ಕಳವು ಮಾಡಿರುವ ಘಟನೆ ತಾಲೂಕಿನ ಜಿಂಕೆ ಬಚ್ಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿಂಕೆ ಬಚ್ಚಹಳ್ಳಿ ಗ್ರಾಮದ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನಿನ್ನೆ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗಿತ್ತು.
ದೇವಾಲಯದಲ್ಲಿ ಮಧ್ಯರಾತ್ರಿವರೆಗೂ ಪೂಜೆ ಕಾರ್ಯಗಳು ನಡೆದು, ಭಕ್ತರು ದೇವರಿಗೆ ಪೂಜೆ ನೆರವೇರಿಸಿದ್ದರು, ಆದರೆ ಇಂದು ಬೆಳಗ್ಗೆ ನೋಡಿದಾಗ ಹುಂಡಿ ಕಳವು ಮಾಡಿರುವುದು ಕಂಡುಬಂದಿದೆ.
ಹುಂಡಿ ಹೊಡೆದಿರುವ ಕಳ್ಳರು ಹುಂಡಿಯಲ್ಲಿದ್ದ ಕಾಣಿಕೆ ಹಣ ಹಾಗೂ ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ ಗಳ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಹುಂಡಿಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಭಕ್ತರ ಕಾಣಿಕೆ ಹಣ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.