Daily Story: ಒಂದೂರಿನಲ್ಲಿ ಒಬ್ಬ ರಾಜನಿದ್ದ. ಈ ಅರಸ ಬಹಳ ಹೃದಯವಂತ; ಆದರೆ, ಅಷ್ಟೇ ಸೋಮಾರಿ. ತನ್ನ ‘ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡುವುದಿರಲಿ, ಸ್ವತಃ ಪ್ರಜೆಗಳನ್ನೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ.
ಅರಸ ಮಾಡುತ್ತಿದ್ದುದು ಎರಡೇ ಕೆಲಸ. ಒಂದು ತಿನ್ನುವುದು, ಇನ್ನೊಂದು ಮಲಗುವುದು. ಬರ ಬರುತ್ತಾ ಅವನ ಆರೋಗ್ಯ ಹದಗೆಡತೊಡಗಿತು. ದೇಹದಲ್ಲಿ ಬೊಜ್ಜು ತುಂಬಿ ಅನಾರೋಗ್ಯ ಪೀಡಿತನಾದ. ಎದ್ದೇಳಲೂ ಆಗದಂತಹ ಪರಿಸ್ಥಿತಿ ಬಂತು.
ತನ್ನ ಮಂತ್ರಿಯನ್ನು ಕರೆದು ಅರಮನೆಗೇ ವೈದ್ಯರನ್ನು ಕರೆಯಲು ಆಜ್ಞೆ ಮಾಡಿದ. ಆದರೆ ಯಾವ ವೈದ್ಯರೂ ರಾಜನ ಬಳಿ ಬರಲಿಲ್ಲ. ಆಗ ಒಬ್ಬ ಪ್ರಜೆ ಬಂದು ರಾಜನ ಬಳಿ ಹೀಗೆ ಹೇಳಿದ:
‘ಪ್ರಭುಗಳೇ, ಇಲ್ಲೇ ಎರಡು ಕಿಲೋ ಮೀಟರ್ ದೂರದಲ್ಲಿ ಒಬ್ಬ ಸಾಧು ಇದ್ದಾನೆ. ಆತ ಬೊಜ್ಜಿನಿಂದ ಬರುವ ಕಾಯಿಲೆಗೆ ಒಳ್ಳೆಯ ಔಷಧಿ ಕೊಡುತ್ತಾನೆ. ಆತ ಕೊಡುವ ಮದ್ದಿನಿಂದ ಬೊಜ್ಜು ಕರಗಿ ಬೇಗನೆ ಕಾಯಿಲೆ ವಾಸಿಯಾಗುತ್ತದೆ’ ಎಂದ.
‘ಆ ಸಾಧು ಸಂತನನ್ನು ಅರಮನೆಗೆ ಬರಹೇಳು’ ಎಂದು ಆಜ್ಞೆ ಮಾಡಿದ ಮಹಾರಾಜ.
‘ಪ್ರಭುಗಳೇ, ಆ ಸಾಧು ಸಂತ ಅರಮನೆಗೆ ಬರಲಾರ; ತಾವೇ ಅಲ್ಲಿಗೆ ದಯಮಾಡಿಸಬೇಕು. ಅದೂ ಕೂಡ ಯಾವುದೇ ವಾಹನದಲ್ಲಿ ಹೋಗುವಂತಿಲ್ಲ; ಕಾಲ್ನಡಿಗೆಯಲ್ಲೇ ಹೋಗಬೇಕು. ಹಾಗಿದ್ದರೆ ಮಾತ್ರ. ಆತ ಚಿಕಿತ್ಸೆ ಕೊಡುತ್ತಾನೆ’ ಎಂದ.
ಕೊನೆಗೂ ರಾಜ ಹೇಗೋ ಪ್ರಯಾಸಪಟ್ಟು ನಡೆದುಕೊಂಡೇ ಸಾಧು ಸಂತನ ಆಶ್ರಮಕ್ಕೆ ಹೋದ. ಆದರೆ ಅಲ್ಲಿ ಆ ಸಾಧು ಸಂತ ಇರಲೇ ಇಲ್ಲ. ಮರುದಿನ ಪುನಃ ರಾಜ ನಡೆದುಕೊಂಡೇ ಚಿಕಿತ್ಸೆಗಾಗಿ ತೆರಳಿದ. ಮಾರನೆ ದಿನವೂ ಸಾಧುಸಂತ ಕಣ್ಮರೆ.
ಮೂರನೆ ದಿನ, ನಾಲ್ಕನೆ ದಿನ… ಹೀಗೆ ಒಂದು ತಿಂಗಳು ಪೂರ್ತಿ ಎರಡೆರಡು ಕಿಲೋ ಮೀಟರ್ ನಡೆದುಕೊಂಡೇ ಆಶ್ರಮಕ್ಕೆ ಹೋಗಿ ಬಂದ ಆ ಮಹಾರಾಜ. ಒಂದು ತಿಂಗಳು ಕಳೆದು ಮತ್ತೊಂದು ದಿನ ಮಹಾರಾಜ ಆಶ್ರಮಕ್ಕೆ ಬಂದಾಗ ಸಾಧು ಸಂತ ಪ್ರತ್ಯಕ್ಷನಾದ.
ಅಷ್ಟು ಹೊತ್ತಿಗೆ ಮಹಾರಾಜನ ಬೊಜ್ಜು ಕರಗಿ ತೂಕವೂ ಬಹಳಷ್ಟು ಇಳಿದು ಹೋಗಿತ್ತು. ಅರಸನ ಆರೋಗ್ಯ ಸಾಕಷ್ಟು ಸುಧಾರಿಸತೊಡಗಿತ್ತು.
ಕೊನೆಯ ದಿನ ಮಹಾರಾಜನನ್ನು ಪರೀಕ್ಷೆ ಮಾಡಿದ ಸಾಧು ಸಂತ, ‘ಪ್ರಭು… ನೀವು ಬರೀ ತಿಂದು ಮಲಗಿದರೆ ಇದೇ ರೀತಿ ತೂಕ ಏರಿ ಬೊಜ್ಜು ತುಂಬಿ ಆರೋಗ್ಯ ಹದಗೆಡುತ್ತದೆ. ಅದಕ್ಕಾಗಿ ದಿನ ನಿತ್ಯ ಐದೈದು ಕಿಲೋಮೀಟರ್ ನಡೆಯಬೇಕು.
ನೀವು ಬೊಜ್ಜು ಕರಗಿಸಿಕೊಳ್ಳಬೇಕು ಎಂದೇ ನಾನು ಒಂದು ತಿಂಗಳು ನೀವು ಬರುವ ಹೊತ್ತಿನಲ್ಲಿ ಮರೆಯಲ್ಲಿ ಇರುತ್ತಿದ್ದೆ. ಆದರೆ ನಿಮ್ಮ ದೈಹಿಕ ಸ್ಥಿತಿಯನ್ನು ಗಮನಿಸುತ್ತಲೇ ಇದ್ದೆ. ಈಗ ನೀವು ಆರಾಮವಾಗಿದ್ದೀರಿ. ಪ್ರತಿನಿತ್ಯ ಬರೀ ತಿಂದು ಮಲಗುವುದನ್ನು ಬಿಟ್ಟು ರಾಜ್ಯದ ಜನರ ಹಿತಾಸಕ್ತಿ ಗಮನಿಸಿ. ಆರೋಗ್ಯದ ಕಡೆ ನಿಗಾ ವಹಿಸಿ, ನಡಿಗೆಯನ್ನು ಸತತವಾಗಿ ಮಾಡಿ. ನೀವು ದೀರ್ಘಕಾಲ ಬಾಳುವಿರಿ..’ ಎಂದು ಸಲಹೆ ಕೊಟ್ಟ.
ರಾಜ ಸೋಮಾರಿತನ ಬಿಟ್ಟ. ಸಾಧುಸಂತನ ಮಾತನ್ನು ಚಾಚೂ ತಪ್ಪದೆ ಪಾಲಿಸತೊಡಗಿದ. ಬೇಗ ಆರೋಗ್ಯವಂತನಾದ.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)
ಒಂದೇ ತಿಂಗಳಲ್ಲಿ ಸಾಕಷ್ಟು ಮನ ಪರಿವರ್ತನೆ ಮಾಡಿಕೊಂಡ. ಪ್ರಜೆಗಳ ಕಷ್ಟ ಸುಖ ವಿಚಾರಿಸತೊಡಗಿದ. ಉತ್ತಮ ಆಡಳಿತ ನೀಡಿದ. ಪ್ರಜೆಗಳೆಲ್ಲರಿಗೂ ಖುಷಿ, ಸಮಾಧಾನವಾಯಿತು.p