Site icon Harithalekhani

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

ಸಿಂಗಪುರ: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನ (World Chess Championship) 14ನೇ ಪಂದ್ಯದಲ್ಲಿ ಭಾರತದ ಚಾಲೆಂಜ‌ರ್ ಡಿ.ಗುಕೇಶ್ ಅವರು ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಪರಾಭವಗೊಳಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ ಮತ್ತು 32 ವರ್ಷ ವಯಸ್ಸಿನ ಹಾಲಿ ಚಾಂಪಿಯನ್ ಲಿರೆನ್ ನಡುವೆ ನಡೆದ 13 ಪಂದ್ಯಗಳು ಡ್ರಾ ಆಗಿದ್ದವು. ಆ ಮೂಲಕ ಇಬ್ಬರೂ ತಲಾ 6.5- 6.5ರಲ್ಲಿ ಅಂಕಗಳೊಂದಿಗೆ ಸಮಬಲ ಹೊಂದಿದ್ದರು.

ಗುರುವಾರ ನಡೆದ ಕೊನೆಯ ಪಂದ್ಯದಲ್ಲಿ ಲಿರೆನ್ ವಿರುದ್ದ ಗುಕೇಶ್ ಜಯ ಸಾಧಿಸುವಲ್ಲಿ ಸಫಲರಾದರು. ಆ ಮೂಲಕ ವಿಶ್ವ ಚಾಂಪಿಯನ್ ಆಗಲು ಅಗತ್ಯವಿರುವ 7.5 ಅಂಕಗಳನ್ನು ಪಡೆದು ವಿಶ್ವ ಚಾಂಪಿಯನ್ ಆದರು.

ಚೆಸ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತೀಯ ಡಿ.ಗುಕೇಶ್ ಅವರು ಚಾಂಪಿಯನ್ ಆದ ತಕ್ಷಣ ಗಳಗಳನೇ ಅತ್ತುಬಿಟ್ಟರು.

ಗೆಲುವಿನ ನಂತರ ನಡೆದ ಪತ್ರಿಕಾಗೋಷ್ಠಿಯ ವೇಳೆ ಪತ್ರಕರ್ತರೊಬ್ಬರು ಅವರು ಯಾವಾಗಲೂ ತುಂಬಾ ಸಂಯಮದಿಂದ ಇರುತ್ತೀರಿ. ನಿಮ್ಮ ಭಾವನೆಗಳನ್ನು ನೀವು ಎಂದಿಗೂ ತೋರಿಸಲಿಲ್ಲ. ಹಾಗಾದರೆ ಇಂದು ಏನಾಯಿತು? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಗುಕೇಶ್, ಇದು ಎಲ್ಲರೂ ಕನಸು ಕಾಣುವ ಕ್ಷಣವಾಗಿದೆ. ನಾನು 6-7 ವರ್ಷ ವಯಸ್ಸಿನಿಂದಲೂ ಚೆಸ್ ಆಡುತ್ತಿದ್ದೇನೆ. ಸುಮಾರು 10 ವರ್ಷಗಳಿಂದ ವಿಶ್ವ ಚಾಂಪಿಯನ್ ಆಗಬೇಕೆಂದು ಕನಸು ಕಂಡಿದ್ದೇನೆ. ಅದು ಇಂದು ನೆರವೇರಿದ್ದು, ಹಾಗಾಗಿ ಈ ಕ್ಷಣ ಬಂದಾಗ ನನಗೆ ತಡೆಯಲಾಗಲಿಲ್ಲ ಎಂದರು.

Exit mobile version