Site icon
Harithalekhani

ಅಲ್ಲು ಅರ್ಜುನ್ ಬಂಧನಕ್ಕೆ ಕಾರಣ ಬಿಚ್ಚಿಟ್ಟ ಸಿಎಂ..!| Pushpa 2

ಹೈದರಾಬಾದ್: ಪುಷ್ಪ 2 (Pushpa 2) ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ‌ಗೆ ಇಂದು ಪೊಲೀಸರಿಂದ ಬಂಧನಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗಿದ್ದು, ಅದೃಷ್ಟವಶಾತ್ ಹೈಕೋರ್ಟ್ ನೀಡಿದ ಜಾಮೀನಿನ ಮೇಲೆ ಹೊರಗುಳಿಯಬೇಕಾಯಿತೆ ಹೊರತು, ಇಲ್ಲವಾದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಬೇಕಾಗಿತ್ತು.

ಪುಷ್ಪ 2 ಸಿನಿಮಾ ಬಿಡುಗಡೆ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಇಂದು ಬಂಧಿಸಲಾಗಿತ್ತು.

ಈ ವಿಷಯ ರಾಷ್ಟ್ರ ಮಟ್ಟದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ಬಣ ಪಡೆದುಕೊಂಡಿದೆ.

ವಿಪಕ್ಷಗಳ ಆಕ್ಷೇಪ: ಇನ್ನೂ ಅಲ್ಲು ಅರ್ಜುನ್ ಬಂಧಿಸಿರುವುದನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಬಿಆರ್​ಎಸ್ ಖಂಡಿಸಿದ್ದು, ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಪ್ರಖ್ಯಾತ ಸ್ಟಾರ್ ನಟನೊಬ್ಬನೊಂದಿಗೆ ಸರ್ಕಾರ ನಡೆದುಕೊಂಡಿರುವ ರೀತಿ ಸರಿಯಲ್ಲ ಎಂದು ಅವು ಹೇಳಿವೆ.

ಅಲ್ಲು ಅರ್ಜುನ್ ಅವರೊಂದಿಗೆ ಇನ್ನಷ್ಟು ಉತ್ತಮವಾಗಿ ವ್ಯವಹರಿಸಬಹುದಿತ್ತು ಎಂದು ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದರೆ, ಖ್ಯಾತ ನಟನನ್ನು ಸಾಮಾನ್ಯ ಕ್ರಿಮಿನಲ್​ಗಳಂತೆ ನಡೆಸಿಕೊಂಡಿರುವುದು ಸರಿಯಲ್ಲ ಎಂದು ಬಿಆರ್​ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಪ್ರತಿಕ್ರಿಯೆ: ಖಾಸಗಿ ಸುದ್ದಿವಾಹಿನಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದ ವೇಳೆ ಅಲ್ಲು ಅರ್ಜುನ್ ಬಂಧನಕ್ಕೆ ಕಾರಣಗಳ ಬಗ್ಗೆ ಸಿಎಂ ರೇವಂತ್ ರೆಡ್ಡಿ ಉತ್ತರಿಸಿದ್ದಾರೆ.

ಡಿ.4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ-2 ಸಿನಿಮಾದ ಪ್ರಿಮಿಯರ್ ಶೋ ವೇಳೆ ಅಲ್ಲು ಅರ್ಜುನ್ ಸಿನಿಮಾ ನೋಡಲು ಬಂದಿದ್ದು, ಸಿನಿಮಾ ನೋಡಿ ಹೊರಡದೆ, ಕಾರಿನ ಮೇಲೆ ಕೂತು ಅಭಿಮಾನಿಗಳನ್ನು ಪ್ರಚೋದಿಸಿದ್ದಾರೆ.

ಅಲ್ಲದೆ ಚಿತ್ರಮಂದಿರಕ್ಕೆ ಭೇಟಿಯ ಕುರಿತು ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಿಲ್ಲ, ಸಿನಿಮಾ ನೋಡಲು ಬಂದವರು ಕಾರಲ್ಲಿ ಬಂದು ಸುಮ್ಮನೆ ಸಿನಿಮಾ ನೋಡಿ ತೆರಳಿದ್ದರೆ ಯಾವುದೇ ಸಮಸ್ಯೆ ಆಗ್ತಾ ಇರಲಿಲ್ಲ. ಚಿತ್ರಮಂದಿರಕ್ಕೆ ಬರುವ ವೇಳೆ ಏಕಾಏಕಿ ಕಾರಿನ ಮೇಲೆ ಕೂತು ಅಭಿಮಾನಿಗಳನ್ನು ಕೆರಳಿಸಿದ ಕಾರಣ, ಕಾಲ್ತುಳಿತ ಉಂಟಾಗಿ ಮಹಿಳೆ ಸಾವನಪ್ಪಿದ್ದಲ್ಲದೆ, ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದ.

ಇದರಿಂದಾಗಿ ಪೊಲೀಸರು ಕಾನೂನಿನ ಅನ್ವಯ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಅವರನ್ನು ಆರೋಪಿ 11 ಮಾಡಿ, ಬಂಧಿಸಿದ್ದಾರೆ ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.

Exit mobile version