ಹೈದರಾಬಾದ್: ಪುಷ್ಪ 2 (Pushpa 2) ಸಿನಿಮಾ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮಹಿಳೆ ಸಾವನಪ್ಪಿರುವ ಕುರಿತು ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ವೇಳೆ ಕನಿಷ್ಠ ಬಟ್ಟೆ ಬದಲಾಯಿಸಲು ಸಮಯ ನೀಡಿ. ನನ್ನನ್ನು ಬಂಧಿಸಿ ಕರೆದೊಯ್ದರೂ ತಪ್ಪಿಲ್ಲ ಆದರೆ ಮಲಗುವ ಕೋಣೆಗೆ ಬಂದು ಈ ರೀತಿ ಬಂಧಿಸುವುದು ಒಳ್ಳೆಯದಲ್ಲ ಎಂದಿದ್ದಾರೆ.
ಚಿಕ್ಕಡಪಲ್ಲಿ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನ ಮಾಡಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೈದರಾಬಾದ್ ಸಿಪಿ ಸಿವಿ ಆನಂದ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಅಲ್ಲು ಅರ್ಜುನ್‌ನನ್ನು ಬಂಧಿಸಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮನೆಯಿಂದ ಹೊರಡುವ ಮುನ್ನ ಮಡದಿ ಮುತ್ತಿಟ್ಟಿದ್ದಷ್ಟೇ ಅಲ್ಲದೆ ಕೈಲಿ ಕಾಫಿ ಕಪ್ ಹಿಡಿದು ಅಲ್ಲು ಅರ್ಜುನ್ ಪೊಲೀಸರೊಂದಿಗೆ ಹೊರಟಿರುವ ವಿಡಿಯೋ ವೈರಲ್ ಆಗಿದೆ.