ಆಂಧ್ರಪ್ರದೇಶ: ಎರಡು ಸಾವಿರ ಬಾಕಿ ಇದ್ದ ಕಾರಣ ಲೋನ್ ಆಪ್ ಕಡೆಯವರು ನೀಡಿದ ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಯುವಕನೋರ್ವ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ವಿಶಾಖ ನಗರದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು 21 ವರ್ಷದ ನರೇಂದ್ರ ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಮೀನುಗಾರ ಆಗಿದ್ದ ನರೇಂದ್ರ ಸಾಲದ ಆ್ಯಪ್ ನಿಂದ ಸಾಲ ಪಡೆದು ಎಲ್ಲ ನಗದು ಪಾವತಿಸಿದ್ದ ಆದರೆ ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದ ಸಮುದ್ರಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಸಾವಿರ ರೂ.ಗಳು ಬಾಕಿ ಇತ್ತು ಎನ್ನಲಾಗಿದೆ. ಆದರೆ ಸಾಲದ ಆಪ್ ನಿರ್ವಾಹಕರು ಕಿರುಕುಳ ನೀಡಿದ್ದಾರೆ.
ಅಲ್ಲದೆ ಆ್ಯಪ್ ಸಿಬ್ಬಂದಿ ನರೇಂದ್ರ ಪತ್ನಿಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ನರೇಂದ್ರನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸಿದ್ದಾರೆ. ಇದ್ರಿಂದ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದಿಯಾಗಿದೆ.
ಈ ರೀತಿಯ ಲೋನ್ ಅಪ್ಲಿಕೇಶನ್ ಗಳ ಕಾಟದಿಂದ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇದ್ದು ಕಾನೂನಾತ್ಮಕವಾಗಿ ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಇನ್ನೂ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳೋದ್ರಲ್ಲಿ ಸಂಶಯವಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.