ಬೆಂಗಳೂರು: ಮಂಗಳವಾರ ನಿಧನರಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಬುಧವಾರ ಸಂಜೆ ನೆರವೇರಿತು.
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕಾಫಿ ಡೇ ಹತ್ತಿರದ ಖಾಲಿ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಕಾಫಿ ಡೇ ಮಾಲೀಕ ಸಿದ್ದಾರ್ಥ್ ಪುತ್ರ ಹಾಗೂ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ವೈದಿಕರ ತಂಡದಿಂದ ವಿಧಿ-ವಿಧಾನ ಕಾರ್ಯಗಳು ನಡೆಯಲಿವೆ. ಹಲವು ಯತಿಗಳು, ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಕೃಷ್ಣ ಅವರ ಅಂತ್ಯಕ್ರಿಯೆ ಜರುಗಿತು.
ನಾಡು ಕಂಡ ಅಪರೂಪದ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ಇಂದು ನಡೆದಿದ್ದು, ನಾಡಿನ ಸರ್ವ ಜನರು ಅಗಲಿದ ನಾಯಕನಿಗೆ ಅಶ್ರುತರ್ಪಣ ಸಲ್ಲಿಸಿ ಭಾವಪೂರ್ಣ ವಿದಾಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹೆಚ್.ಡಿ.ಕುಮಾರಸ್ವಾಮಿ, ಸಂಸದರಾದ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ಮಾಜಿ ಸಿಎಂ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸೇರಿದಂತೆ ಸಚಿವರು, ಸಂಸದರು, ಮಾಜಿ ಸಚಿವರು, ಸಂಸದರು ಶಾಸಕರು ಸೇರಿದಂತೆ ಅನೇಕರು ಹಾಜರಿದ್ದರು.