ಬೆಂಗಳೂರು: ದೀಮಂತ ರಾಜಕಾರಣಿ, ಮಾಜಿ ಮುಖ್ಯ ಮಂತ್ರಿ, ಕೇಂದ್ರ ಮಾಜಿ ಸಚಿವ, ಪದ್ಮ ವಿಭೂಷಣ ಎಸ್.ಎಂ. ಕೃಷ್ಣ (SM Krishna) ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ವೃತ್ತಿಯಲ್ಲಿ ವಕೀಲರಾಗಿದ್ದ ಎಸ್.ಎಂ.ಕೃಷ್ಣ ಅವರು, 1962 ರಲ್ಲಿ ಮೊದಲ ಬಾರಿಗೆ ಮದ್ದೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಿಂದ 2004 ರ ವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು, ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿ ಕೂಡ ಕರ್ತವ್ಯ (2004ರಿಂದ 2008) ನಿರ್ವಹಿಸಿದ್ಧರು. ಮಂಡ್ಯ ಲೋಕಸಭಾ ಸದಸ್ಯರಾಗಿ ಕೂಡ ಆಯ್ಕೆಯಾಗಿದ್ದ ಕೃಷ್ಣ ಅವರು ವಿದೇಶಾಂಗ ಸಚಿವರಾಗಿಯೂ ಕೆಲಸ ಮಾಡಿದ್ದರು.
1971ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದ ಕೃಷ್ಣ ಅವರು 2017ರ ಮಾರ್ಚ್ ನಲ್ಲಿ ಇದ್ದಕ್ಕಿದ್ದಂತೆ ಕಾಂಗ್ರೆಸ್ ನಿಂದ ದೂರವಾಗಿ ಬಿಜೆಪಿ ಸೇರಿದರು. 2023ರ ವರೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿಯೇ ಉಳಿದಿದ್ದರು.
ಅವರಿಗೆ ಪತ್ನಿ ಪ್ರೇಮಾ ಇದ್ದಾರೆ. ಅವರ ಅಳಿಯ ಕಾಫಿ ಢೇ ಮಾಲಿಕ ಸಿದ್ಧಾರ್ಥ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಕೃಷ್ಣ ಅವರ ರಾಜಕೀಯ ಮುತ್ಸದ್ದಿತನಕ್ಕೆ 2023 ರಲ್ಲಿ ಕೇಂದ್ರ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ನಾಳೆ ರಜೆ ಘೋಷಣೆ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಜೊತೆಗೆ ನಾಳೆ ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ.
ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಎಸ್‌ಎಂ ಕೃಷ್ಣ ಅವರ ಅಂತ್ಯಕ್ರಿಯೆಯನ್ನು 2:11.12.20240 ಬುಧವಾರದಂದು ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತಿದೆ.
ಗೌರವಾರ್ಥವಾಗಿ ನಾಳೆ (ಡಿ.11)ರ ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ (ಎಲ್ಲಾ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.
ದಿನಾಂಕ:10.12.2024 ರಿಂದ ದಿನಾಂಕ:12.12.2024 ರವರೆಗೆ (ಉಭಯ ದಿನಗಳು ಸೇರಿ) ಮೂರು ದಿನಗಳು ರಾಜ್ಯಾದ್ಯಂತ ಶೋಕಾಚರಣೆ ಮಾಡಲಾಗುವುದು ಹಾಗೂ ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.
ನಿಯತವಾಗಿ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವುದಕ್ಕೆ ಆದೇಶಿಸಲಾಗಿದೆ.