ದೊಡ್ಡಬಳ್ಳಾಪುರ: ರಾಜ್ಯ ರಾಜಕಾರಣದ ಹಿರಿಯ ರಾಜಕೀಯ ಮುತ್ಸದ್ದಿ ಎಸ್‌ಎಂ ಕೃಷ್ಣ (SM Krishna) ಅವರ ಅಗಲಿಕೆ ರಾಷ್ಟ್ರ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಹೇಳಿದ್ದಾರೆ.
ಎಸ್ಎಂ ಕೃಷ್ಣ ಅವರ ನಿಧನದ ಕುರಿತು ಸಂತಾಪ ಸೂಚಿಸಿರುವ ಅವರು, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಎಸ್‌ಎಂ ಕೃಷ್ಣ ಅವರ ದೂರದೃಷ್ಟಿ ಯೋಜನೆಗಳಿಂದ ಇಂದು ದೇಶ ಮತ್ತು ರಾಜ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಹತ್ವ ಪಡೆಯಲು ಕಾರಣವಾಗಿದೆ.
ಕರ್ನಾಟಕದ ಮುಖ್ಯಮಂತ್ರಿಗಳಾದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಕನಸನ್ನು ನನಸು ಮಾಡುವ ಉದ್ದೇಶದಿಂದ ಇತರ ರಾಜ್ಯಗಳ ತೀವ್ರ ಸ್ಪರ್ಧೆಯ ನಡುವೆಯೂ IT, BT ಕ್ಷೇತ್ರವನ್ನು ಬೆಂಗಳೂರಿಗೆ ತಂದು ಕರ್ನಾಟಕದ ರಾಜಧಾನಿ ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡರಂತೆ ಮತ್ತೆ ಕಟ್ಟಿದವರೆಂದರೂ ತಪ್ಪಾಗಲಾರದು.
ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮಖ ರಾಜಕಾರಣಿಗಳಿಗೆ ಮಾದರಿಯಾಗಿದೆ.
ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು ಎಂದು ಟಿ.ವೆಂಕಟರಮಣಯ್ಯ ತಿಳಿಸಿದರು.