ನೆಲಮಂಗಲ: ಕೆರೆ ಪಾಳ್ಯದ ಬಂಡೆಯೊಂದರ ಮೇಲೆ ಕಾಣಿಸಿಕೊಂಡಿದ್ದ ಸುಮಾರು ಏಳು ವರ್ಷದ ಚಿರತೆಯು (leopard) ಕಳೆದ ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸಿಲುಕಿದೆ.
ಕಳೆದ ಇಪ್ಪತ್ತು ದಿನಗಳಿಂದಲೂ ತಾಲ್ಲೂಕಿನ ಸೋಂಪುರೆ ಹೋಬಳಿಯ ಹೆಗ್ಗುಂದ, ನರಸೀಪುರ, ಕೆರೆಪಾಳ್ಯ, ಇಮಚೇನಹಳ್ಳಿ, ಬುಗುಡಿಹಳ್ಳಿ, ಕೆರೆಪಾಳ್ಯ ಗ್ರಾಮಗಳಲ್ಲಿ ಜನತೆಯ ನಿದ್ರಾಭಂಗಕ್ಕೆ ಕಾರಣವಾಗಿದ್ದವು.
ಇವುಗಳ ಪೈಕಿ ನಾಲ್ಕನೇ ಚಿರತೆಯಾಗಿ ಕಳೆದ ನಾಲ್ಕು ದಿವಸಗಳ ಹಿಂದಷ್ಟೇ ಇರಿಸಿದ್ದ ಬೋನಿಗೆ ಈ ಚಿರತೆಯು ಬಿದ್ದಿದೆ. ಈ ಸುದ್ದಿಯು ಕಾಡಿಚ್ಚಿನಂತೆ ನರಸೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹರಡಿದ್ದರಿಂದಾಗಿ ಜನರು ಚಿರತೆಯನ್ನು ಕಣ್ಣುಂಬಿಕೊಳ್ಳಲು ಕಾರು, ಬೈಕ್‌ಗಳ ಮೂಲಕ ಬಂದು ಮುಗಿಬಿದ್ದು ಅಬ್ಬಾ… ಎನ್ನುವ ಮೂಲಕ ನಿಟ್ಟುಸಿರು ಬಿಡುತ್ತಿದ್ದ ದೃಶ್ಯ ಸಹಜವಾಗಿ ಕಂಡುಬಂತು. ಆದರೆ ತಾಲ್ಲೂಕಿನಲ್ಲಿ ಅದಿನ್ನೆಷ್ಟು ಚಿರತೆಗಳು ಎಲ್ಲೆಲ್ಲಿ ಅಡಗಿವೆಯೋ ಎಂಬ ಪ್ರಶ್ನೆ ಮಾತ್ರ ಇನ್ನೂ ಜೀವಂತವಿದೆ.
ತಾಲ್ಲೂಕಿನಲ್ಲಿಯೇ ಹುಟ್ಟಿದ್ದಾವೆಯೋ ಚಿರತೆಗಳು ಅಥವಾ ಬೇರೆಡೆಯಿಂದ ತಂದು ಈ ಭಾಗದ ಕಾಡಿನೊಳಕ್ಕೆ ಬಿಡುತ್ತಿದ್ದಾರೋ ಎಂಬುವ ಗುಮಾನಿ ಹಳ್ಳಿಗರನ್ನು ಕಾಡತೊಡಗಿದೆ. ಜನರು ಹೌಹಾರುವಂತೆ ಚಿರತೆಗಳು ಹಗಲು ರಾತ್ರಿ ಎನ್ನದೇ ಉದರ ಪೋಷಣೆಗೆ ಇಳಿದುಬಿಟ್ಟಿವೆ.
ಅದಕ್ಕಾಗಿಯೇ ಗ್ರಾಮಗಳತ್ತ ಬರುತ್ತಿವೆ. ಚಿರತೆಗಳಿಗೆ ಆಹಾರದ ಚಿಂತೆ, ಜನರಿಗೆ ಬದುಕುವ ಚಿಂತೆ ಎಂಬಂತಾಗಿದೆ. ಇತ್ತೀಚೆಗೆ ಮೇಲಿಂದ ಮೇಲೆ ಅಲ್ಲಲ್ಲೇ ಹಳ್ಳಿಗರ ಕಣ್ಣಿಗೆ ಕಾಣಸಿಗುತ್ತಿರುವ ಚಿರತೆಗಳಿಂದ ಜನರು ಭಯ ಭೀತರಾಗಿದ್ದಾರೆ.
ಚಿರತೆಗಳ ಬಗ್ಗೆ ಜನರು ಎಚ್ಚರಿಕೆವಹಿಸಲೇಬೇಕಾಗಿದೆ. ಅರಣ್ಯ ಇಲಾಖೆ ಅವುಗಳ ಬಗ್ಗೆ ನಿಗಾಯಿಟ್ಟಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)