Daily story: ನದಿಯಲ್ಲಿ ಒಂದು ಮೊಸಳೆ ಇತ್ತು. ಮೊಸಳೆಗೆ ಬೇಟೆಯಾಡಿ ತಿನ್ನುವಷ್ಟು ಬುದ್ದಿವಂತಿಕೆ ಇರಲಿಲ್ಲ ಜೊತೆಗೆ ವಯಸ್ಸ ಆಗಿತ್ತು. ಹಾಗಂತ ಉಪವಾಸ ಇರಲು ಆಗೋದಿಲ್ಲ ಅಲ್ವ? ಏನು ಮಾಡೋದು ಅಂತ ಯೋಚಿಸುತ್ತಿತ್ತು.
ಅಷ್ಟರಲ್ಲಿ ಒಂದು ನರಿ ಕಂಡಿತು. ನರಿಯ ಹತ್ತಿರ ನರಿ, ನನಗೆ ವಯಸ್ಸಾಗಿದೆ. ನನಗೆ ನೀರಿನೊಳಗೆ ಈಜಿ ಬೇಟೆಯಾಡಲು ಆಗೋದಿಲ್ಲ. ನಾನಿಲ್ಲೇ ದಡದಲ್ಲಿ ಮಲ್ಗೊಂಡಿರ್ತೀನಿ. ನೀನು ಪ್ರಾಣಿಗಳನ್ನು ಇಲ್ಲಿಗೆ ಕರೆದುಕೊಂಡು ಬಾ. ನಾನು ಅವುಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತೇನೆ, ಎಂದಿತು.
ಮೊಸಳೆ ತಿಂದುಬಿಟ್ಟಿದ್ದನ್ನು ತಾನು ತಿನ್ನಬಹುದೆಂದು ಯೋಚಿಸಿದ ನರಿ ಮೊಸಳೆಗೆ ‘ಹಾಗೇ ಆಗಲಿ’ ಎಂದಿತು.
ನರಿಯು ಪ್ರಾಣಿಗಳನ್ನು ಹುಡುಕಿಕೊಂಡು ಕಾಡಿನೊಳಗೆ ಹೋಯಿತು. ಅಷ್ಟರಲ್ಲೇ ಮೊಲವೊಂದು ನರಿಯ ಕಣ್ಣಿಗೆ ಬಿದ್ದಿತು. ನರಿಯು ಮೊಲದ ಹತ್ತಿರ ಹೋಗಿ ‘ಮೊಸಳೆ ನಿನ್ನ ಹತ್ತಿರ ಮಾತನಾಡಬೇಕಂತೆ, ಬಾ’ ಎಂದಿತು.
ಆ ಮೊಲ ತುಂಬಾ ಬುದ್ಧಿವಂತ. ಇದರಲ್ಲೇನೋ ಮೋಸವಿದೆ ಎಂದು ಅದಕ್ಕೆ ಗೊತ್ತಾಯಿತು. ‘ನಾನು ಬರೋದಿಲ್ಲ. ನನಗೆ ಮೊಸಳೆಯನ್ನು ಕಂಡರೆ ತುಂಬಾ ಹೆದರಿಕೆ’ ಎಂದಿತು ಮೊಲ. ಸಪ್ಪೆ ಮುಖದಿಂದ ಮೊಸಳೆಯ ಬಳಿಗೆ ವಾಪಸಾದ ನರಿಗೆ ಆಗ ಮತ್ತೊಂದು ಉಪಾಯ ಹೊಳೆಯಿತು.
‘ಮೊಸಳೆ, ನೀನು ಮರದ ಕೆಳಗೆ ಸತ್ತಂತೆ ಮಲಗಿಕೋ, ಮೊಸಳೆ ಸತ್ತಿದೆ ಎಂದು ಹೇಳಿ ನಾನು ಮೊಲವನ್ನು ಕರೆದುಕೊಂಡು ಬರುತ್ತೇನೆ’ ಎಂದಿತು. ಮೊಸಳೆಯು ಮರದ ಕೆಳಗೆ ಸತ್ತಂತೆ ಮಲಗಿತು.
ನರಿಯು ಮೊಲದ ಹತ್ತಿರ, ‘ಮೊದಲೇ, ನಿನ್ನನ್ನು ನೋಡಬೇಕೆಂದು ಬಯಸಿದ್ದ ಮೊಸಳೆಯು ಸತ್ತು ಹೋಗಿದೆ. ಈಗಲಾದರೂ ಬಂದು ಅದನ್ನು ನೋಡಿ ಕೊನೆ ಆಸೆ ಈಡೇರಿಸು’ ಎಂದಿತು.
ಮೊಲಕ್ಕೆ ಪಾಪ ಎನಿಸಿತು. ನರಿಯೊಂದಿಗೆ ಮೊಸಳೆಯು ಇದ್ದ ಜಾಗಕ್ಕೆ ಬಂದಿತು. ಮೊಸಳೆಯನ್ನು ಕಂಡು ಮೊಲಕ್ಕೆ ಅನುಮಾನವಾಯಿತು. ಹಾಗಾಗಿ ಸ್ವಲ್ಪ ದೂರದಲ್ಲೇ ನಿಂತುಕೊಂಡಿತು. ಮೊಸಳೆ ಸತ್ತಿದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಅದಕ್ಕೊಂದು ಉಪಾಯ ಮಾಡಿತು.
ನರಿಯ ಹತ್ತಿರ ‘ಮೊಸಳೆಗಳು ಸತ್ತಾಗ ಬಾಲ ಅಲ್ಲಡಿಸುತ್ತಿರುತ್ತವೆ. ಆದರೆ ಇದರ ಬಾಲ ಅಲ್ಲಾಡುತ್ತಿಲ್ಲವಲ್ಲ’ ಎಂದಿತು ಮೊಲ. ಮೊಲದ ಮಾತನ್ನು ಕೇಳಿದ್ದೆ ತಡ, ಮೊಸಳೆಯು ತನ್ನ ಬಾಲ ಅಲ್ಲಾಡಿಸಲು ಶುರುಮಾಡಿತು. ಮೊಲಕ್ಕೆ ನರಿ ಮತ್ತು ಮೊಸಳೆಯ ಮೋಸ ಅರಿವಾಯಿತು. ಕೂಡಲೇ ಅಲ್ಲಿಂದ ಓಡಿಹೋಗಿ ಜೀವ ಉಳಿಸಿಕೊಂಡಿತು.
ಕೃಪೆ: ಲಕ್ಷ್ಮಿ ತಿಮ್ಮಪ್ಪ, ಶಿವಮೊಗ್ಗ (ಸಾಮಾಜಿಕ ಜಾಲತಾಣ)