ಹೊಸಕೋಟೆ: ತಾಲೂಕಿನೊಂದಿಗೆ ನಮ್ಮ ಕುಟುಂಬ ಅವಿನಾಭಾವ ಸಂಬಂಧ ಹೊಂದಿದೆ. ಆ ಬಾಂಧವ್ಯ ನಮಗೆ ಮುಖ್ಯ. ಅದನ್ನು ಉಳಿಸಿಕೊಳ್ಳುತ್ತೇವೆಯೇ ಹೊರತು ಮಾರಿಕೊಳ್ಳುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ (sharath bachegowda) ಹೇಳಿದರು.
ನಂದಗುಡಿ-ಸೂಲಿಬೆಲೆ ಭಾಗದಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿ ಕೊಳ್ಳಲು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ, ರೈತರು ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಬೇಡಿ ಎಂದು ಶಾಸಕ ಶರತ್ ಬಚ್ಚೇಗೌಡ ರೈತರಿಗೆ ಭರವಸೆ ನೀಡಿದರು.
ನಂದಗುಡಿಯ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತರಿಗೆ ಆತ್ಮಸ್ಥೆರ್ಯ ತುಂಬಿ ಅವರು ಮಾತನಾಡಿದರು.
ಶರತ್ ಬಚ್ಚೇಗೌಡ ಆದ ನಾನು ಮಾರಾಟದ ವಸ್ತುವಲ್ಲ, ನನ್ನ ಸ್ವಾಭಿಮಾನ ಕೊಂಡುಕೊಳ್ಳುವಷ್ಟು ದುಡ್ಡು ಯಾರ ಬಳಿಯೂ ಇಲ್ಲ. ನಾನು ಮಾರಾಟದ ವಸ್ತುವಾಗಿದ್ದರೆ 2019ರಲ್ಲೇ ಮಾರಾಟವಾಗುತ್ತಿದ್ದೆ.
ಭೂ ಸ್ವಾಧೀನ ಒಪ್ಪಿಗೆಯಿಂದ ನನಗೆ 2 ಸಾವಿರ ಕೋಟಿ ಕಮಿಷನ್ ನಮ್ಮ ಮನೆಗೆ ಬಂದಿಲ್ಲ. ನಾನು ದುಡ್ಡಿಗೆ ಮಾರಾಟ ಆಗುವ ಸರಕಲ್ಲ. ನಮ್ಮ ಕುಟುಂಬ 40-50 ವರ್ಷಗಳಿಂದ ಹೊಸಕೋಟೆ ತಾಲೂಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಆ ಬಾಂಧವ್ಯ ನಮಗೆ ಮುಖ್ಯ. ಅದನ್ನು ಉಳಿಸಿಕೊಳ್ಳುತ್ತೇವೆಯೇ ಹೊರತು ಮಾರಿಕೊಳ್ಳುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ರೈತರ ಆಶೀರ್ವಾದದಿಂದ 139 ಸ್ಥಾನ ಗಳಿಸಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರೈತರ ಪರವಾಗಿದ್ದಾರೆ. 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿ ಯಲಿದೆ. ರಾಜ್ಯ ರೈತರ ಹಿತಾಸಕ್ತಿ ವಿರುದ್ಧವಾಗಿ ಯಾವುದೇ ಕೆಲಸಕ್ಕೂ ನಾವು ಮುಂದಾಗುವುದಿಲ್ಲ.
2028ರ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರ ಮೀಸಲಾತಿ ಬದಲಾಗುವುದಿಲ್ಲ. ನಾನು ಯಾವುದೇ ಕ್ಷೇತ್ರಕ್ಕೂ ಪಲಾಯನ ಮಾಡುವುದಿಲ್ಲ. ರೈತರು ಊಹಾಪೋಹಾಗಳಿಗೆ ಕಿವಿಗೊಡಬಾರದು. ನಂದಗುಡಿ ಭಾಗದ 36 ಹಳ್ಳಿಗಳ ಭೂ ಸ್ವಾಧೀನಕ್ಕೆ ನಾನು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ರೈತರಿಗೆ ಭರವಸೆ ನೀಡಿದರು.