ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಕುಂದಾಣದ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ತಿಂಡ್ಲು ಗ್ರಾಮದಲ್ಲಿ ”ತಡವಾದ ಮುಂಗಾರಿಗೆ ರಾಗಿ ಹೊಸ ತಳಿ ಎಂ.ಎಲ್-322 ರ ಪರಿಚಯ, ಪ್ರಾತ್ಯಕ್ಷಿಕೆ ಮತ್ತು ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
`ಪ್ರಾಧ್ಯಾಪಕ ಡಾ.ವೆಂಕಟೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯಕ್ಕೆತಕ್ಕಂತೆ ರಾಗಿಯಲ್ಲಿ ಮಧ್ಯಮಾವಧಿ ತಳಿಯಾದ ಎಂ.ಎಲ್-322ಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಬಿಡುಗಡೆಗೊಳಿಸಿದ್ದು, ಈ ತಳಿಯು ಬೆಂಕಿ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ.
ಆಗಸ್ಟ್ ತಿಂಗಳಿನಲ್ಲಿ ಬಿತ್ತನೆ ಮಾಡಲು ಸೂಕ್ತವಾಗಿದ್ದು, ಬಿತ್ತನೆ ಮಾಡುವ ಮೊದಲು ರೈತರು ಮೇ, ಜೂನ್ ತಿಂಗಳಿನಲ್ಲಿ ಹಸಿರೆಲೆ ಗೊಬ್ಬರದ ಬೆಳೆಯಾದ ಅಪ್ಪೆಣಬನ್ನು ಬಿತ್ತನೆ ಮಾಡಿ, ಹೂವಾಡುವ ಹಂತದಲ್ಲಿ ಭೂಮಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಎಂದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೈ. ಸತ್ಯನಾರಾಯಣ, ಕೃಷಿ ಇಲಾಖೆಯಲ್ಲಿ ದೊರಕುವ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಂಡಿರುವ ನ್ಯಾನೋ ಯೂರಿಯಾ ಬಗ್ಗೆ ಮಾಹಿತಿ ಹಂಚಿಕೊಂಡು, ರೈತರಿಗೆ ಪ್ರಾತ್ಯಕ್ಷಿಕೆಗಾಗಿ ನೀಡಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಚೇತನ್ ಮತ್ತಿತರರು ಉಪಸ್ಥಿತರಿದ್ದರು.