ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಡಾ.ಶಿವರಾಜ್ ಕುಮಾರ್ (Shiva Rajkumar) ದಂಪತಿ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ಮುಡಿ ನೀಡಿದ್ದಾರೆ.
ಮೂಲಗಳ ಮಾಹಿತಿಯಂತೆ ಶುಕ್ರವಾರ ಸಂಜೆ ತಿಮ್ಮಪ್ಪನ ದರ್ಶನ ಪಡೆದಿರುವ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರು ಮುಡಿ ಅರ್ಪಿಸಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಗ್ಯ ಸಮಸ್ಯೆ: ಇತ್ತೀಚಿಗೆ ಯೂಟ್ಯೂಬ್ ಒಂದಕ್ಕೆ ನೀಡಿದ ಸಂದರ್ಶನ ದಲ್ಲಿ ನನಗೂ ಆರೋಗ್ಯ ಸಮಸ್ಯೆಯಿದೆ, ನಾನು ಸುಳ್ಳು ಹೇಳಲ್ಲ, ಟ್ರೀಟ್ ಮೆಂಟ್ ತಗೋತಿದ್ದೇನೆ, ಆರೋಗ್ಯ ಸಮಸ್ಯೆಯಿಂದ ನನಗೆ ಗಾಬರಿಯಾಗಿತ್ತು ಆದರೆ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದರು.
ನನಗೆ ಅನಾರೋಗ್ಯ ಇರುವುದು ನಿಜ, ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ, ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಆಗಿದೆ. ಇನ್ನೆರಡು ಸೆಷನ್ ಮಾಡಬೇಕಿದೆ. ಒಂದು ಸರ್ಜರಿ ನಡೆಯಬೇಕಿದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎನ್ನುವ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ನಾನು ಫುಲ್ ಫಾರ್ಮ್ ಶಿವಣ್ಣ ಆಗಿ ಬರುತ್ತೇನೆ ಎಂದಿದ್ದಾರೆ.