Daily story: ಒಂದು ಊರಿನಲ್ಲಿ ಒಬ್ಬಳು ಮುದುಕಿ ವಾಸವಾಗಿದ್ದಳು. ಅವಳು ಒಂದು ದಿನ ಅಂಗಡಿಯಿಂದ ಅವರೆಕಾಳನ್ನು ತಂದಳು. ಸಾರು ಮಾಡಲೆಂದು ಬೇಯಿಸಲು ಅದನ್ನು ಒಂದು ಪಾತ್ರೆಗೆ ಸುರಿದಳು. ಆಗ ಒಂದು ಕಾಳು ಪಾತ್ರೆಯಿಂದ ಕೆಳಕ್ಕೆ ಬಿತ್ತು. ಅದು ಪುಟ ಪುಟನೆ ಓಡಿಹೋಯಿತು. ಆಗ ಅದಕ್ಕೆ ಒಂದು ಕೋಲಿನ ತುಂಡು ಸಿಕ್ಕಿತು.
ಅದು ಹೇಳಿತು, ‘ಅಜ್ಜಿ ಸೌದೆಯನ್ನು ಒಲೆಗೆ ಹಾಕುವಾಗ ನಾನು ತಪ್ಪಿಸಿಕೊಂಡು ಇಲ್ಲಿಗೆ ಬಂದೆ. ನಾವು ಒಟ್ಟಿಗೆ ಸ್ನೇಹಿತರಾಗಿರೋಣ’ ಎಂದಿತು. ಹಾಗೆ ಅವು ಸಾಗುವಾಗ ಒಂದು ಕೆಂಡ ಭೇಟಿಯಾಯಿತು. ‘ನಾನು ಅಜ್ಜಿ ಒಲೆ ಉರಿಸುವಾಗ ತಪ್ಪಿಸಿಕೊಂಡೆ. ಇಲ್ಲದಿದ್ದರೆ ಈಗ ಬೂದಿಯಾಗುತ್ತಿದ್ದೆ. ನಾವು ಮೂವರೂ ಸ್ನೇಹಿತರಾಗಿರೋಣ’ ಎಂದಿತು.
ಮೂವರೂ ಓಡಿದವು. ಅವರ ದಾರಿಯಲ್ಲಿ ಒಂದು ಉದ್ದವಾದ ನೀರಿನ ಕಾಲುವೆ ಇತ್ತು, ಅದನ್ನು ಹೇಗೆ ದಾಟುವುದು ಎಂಬ ಚಿಂತೆಯಾಯಿತು. ಆಗ ಒಂದು ಇದ್ದಿಲು ನುಡಿಯಿತು ‘ಸೌದೆ ತುಂಡು ಕಾಲುವೆಗೆ ಅಡ್ಡವಾಗಿ ಮಲಗಲಿ ನಾವು ಅದರ ಮೇಲೆ ದಾಟಿ ಆ ಕಡೆಗೆ ಸಾಗುವ’.
ಈ ಉಪಾಯಕ್ಕೆ ಮೂವರೂ ಒಪ್ಪಿದರು. ಹಾಗೆಯೇ ಸೌದೆಯ ತುಂಡು ಕಾಲುವೆಗೆ ಅಡ್ಡವಾಗಿ ಮಲಗಿತು. ಮೊದಲು ಅವರೆಕಾಳು ದಾಟಿತು. ಆ ನಂತರ ಕೆಂಡ ದಾಟಲು ಬಂದಿತು. ನಡೆಯುತ್ತಾ ಕಾಲುವೆಯ ಮಧ್ಯಭಾಗಕ್ಕೆ ಬಂದಾಗ ಭಯವಾಗಿ ಹೆಜ್ಜೆ ಇಡಲು ಅದಕ್ಕೆ ಆಗಲಿಲ್ಲ.
ಆಗ ಸೌದೆಯ ತುಂಡಿಗೆ ಕೆಂಡದ ಬಿಸಿ ಹತ್ತಿತು. ‘ಬೇಗ ದಾಟು ಇಲ್ಲವಾದರೆ ನಾನು ಸುಟ್ಟು ಹೋಗುವೆ’ ಎಂದು ಸೌದೆ ಅರಚಿತು. ಆದರೆ ಕೆಂಡಕ್ಕೆ ನಡೆಯಲು ಆಗಲಿಲ್ಲ. ಇದರಿಂದ ಸೌದಯ ತುಂಡು ಎರಡಾಗಿ ಸೀಳಿ ಸುಟ್ಟಿತು ಎರಡು ತುಂಡುಗಳು ಕಾಲುವೆಗೆ ಬಿದ್ದವು. ಅವುಗಳ ಜೊತೆಗೆ ಕೆಂಡವೂ ನೀರಿಗೆ ಬಿತ್ತು. ಇದರಿಂದಾಗಿ ಎರಡೂ ಸತ್ತು ಹೋದವು.
ಇದನ್ನು ನೋಡಿ ಅವರೆಕಾಳು ನಕ್ಕಿತು. ಗಹಗಹಿಸಿ ನಕ್ಕಾಗ ಅದರ ಹೊಟ್ಟೆ ಬಿರಿಯಿತು. ಅವರೆಕಾಳು ನೋವಿನಿಂದ ಕಿರಿಚಿತು.
ಅಲ್ಲೇ ಹತ್ತಿರ ಇದ್ದ ಮರದಲ್ಲಿದ್ದ ನಿದ್ರಿಸಿದ್ದ ಜೇಡ ಅವರೆಕಾಳಿನ ಕಿರುಚಾಟಕ್ಕೆ ಎಚ್ಚರಗೊಂಡಿತು. ಅವರೆಕಾಳಿನ ಸ್ಥಿತಿ ಕಂಡು ಮರುಕಗೊಂಡಿತು. ದಾರವನ್ನು ಹೆಣೆದು ಅವರೆಕಾಳಿನ ಬಿರಿದ ಹೊಟ್ಟೆಯನ್ನು ಹೊಲಿಯಿತು. ಅವರೆಕಾಳು ಗುಣಮುಖವಾಯಿತು. ಆದರೆ ಅಂದಿನಿಂದ ಇಂದು ಕೂಡಾ ಅವರೇಕಾಳಿನ ಮಧ್ಯೆ ಬಿಳಿದಾರದ ಗುರುತು ಉಳಿದುಕೊಂಡಿತು.
ಕೃಪೆ: ಜಯಲಕ್ಷ್ಮೀ, ವಿಟ್ಲ (ಸಾಮಾಜಿಕ ಜಾಲತಾಣ)