ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಫಲಿತಾಂಶದ ಆತ್ಮಾವಲೋಕನ ಹಾಗೂ ಮುಂಬರುವ ಬಿಬಿಎಂಪಿ ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆಗಳ ಬಗ್ಗೆ JDS ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಹತ್ವದ ಸಭೆ ನಡೆಯಿತು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಪ್ರಮುಖವಾಗಿ ಸದಸ್ಯತ್ವ ಅಭಿಯಾನ, ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಯಿತು.
ಚನ್ನಪಟ್ಟಣ ಸೋಲಿನ ಬಗ್ಗೆ ಯಾರೂ ಎದೆಗುಂದುವ ಅಗತ್ಯವಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ವಾಮಮಾರ್ಗದಿಂದ ಪಡೆದುಕೊಂಡಿರುವ ಗೆಲುವು ಅದಾಗಿದೆ. ಹೀಗಾಗಿ ಕಾರ್ಯಕರ್ತರು, ಮುಖಂಡರು ಚಿಂತೆ ಮಾಡದೆ ಕೆಚ್ಚಿನಿಂದ ಪಕ್ಷ ಕಟ್ಟಲು ತೊಡಬೇಕಿದೆ ಎಂದು ರಮೇಶ್ ಗೌಡ ಹೇಳಿದರು.
ಸಂಘಟನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು – ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಮತ್ತೂ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಆದೇಶದಂತೆ ಎಲ್ಲರೂ ಕೆಲಸ ಮಾಡಬೇಕು. ಬೆಂಗಳೂರಿನಲ್ಲಿ ಪ್ರತಿ ವಾರ್ಡ್, ಮತಗಟ್ಟೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕು ಎಂದು ತಿಳಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಿದೆ. ಆದರೆ, ಉಪ ಚುನಾವಣೆಯಲ್ಲಿ ಆ ಪಕ್ಷ ಕೈಚಳಕ ತೋರಿಸಿ ಗೆದ್ದಿದೆ. ಅದು ಹೇಗೆಲ್ಲಾ ವಾಮಮಾರ್ಗಗಳನ್ನು ಅನುಸರಿಸಿತು ಎನ್ನುವ ಬಗ್ಗೆ ಹಾದಿಬೀದಿಯಲ್ಲಿ ಜನರು ಚರ್ಚೆ ನಡೆಸುತ್ತಿದ್ದಾರೆ ಎಂದು ಅವರು ದೂರಿದರು.
ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಳ ಮುಖ್ಯ. ಹೀಗಾಗಿ ತಳಮಟ್ಟದಿಂದ ನಾವು ಸಂಘಟನೆ ಮಾಡಿಕೊಂಡು ಬರಬೇಕು. ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಮುಖಂಡರಾದ ಜಗದೀಶ್, ಶೈಲಜಾ ರಾವ್, ಮಾಜಿ ಶಾಸಕ ಶಿವರಾಜ್, ಪಾಲಿಕೆ ಮಾಜಿ ಸದಸ್ಯರಾದ ಮುನಿಸ್ವಾಮಿ, ಅಂದಾನಪ್ಪ, ನಂದಾ ಸಿಂಗ್, ತಾರಾ ಲೋಕೇಶ್, ವೇಣುಗೋಪಾಲ್ ಮುಂತಾದವರು ಈ ಸಭೆಯಲ್ಲಿ ಭಾಗಿಯಾಗಿದ್ದರು.