Site icon ಹರಿತಲೇಖನಿ

ಬಾಣಂತಿಯರ ಸಾವಿನಲ್ಲಿ ಕರ್ನಾಟಕ ನಂಬರ್‌ 1 ಆಗಿದೆ; ಆರ್.ಅಶೋಕ| RAshoka

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿರುವಾಗ ಕಾಂಗ್ರೆಸ್‌ 20 ಕೋಟಿ ರೂ. ಖರ್ಚು ಮಾಡಿ ಸಮಾವೇಶ ಮಾಡಿದೆ. ಮಕ್ಕಳನ್ನು ಉಳಿಸದೆ ನೂರು ಸಮಾವೇಶ ಮಾಡಿದರೂ ಸರ್ಕಾರಕ್ಕೆ ಜನರ ಶಾಪ ತಟ್ಟದೆ ಇರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (RAshoka) ಆಕ್ರೋಶ ಹೊರಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಬದಲಾಗಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ಐವಿ ದ್ರಾವಣದಿಂದಾಗಿ ತಾಯಂದಿರು ಸತ್ತಿದ್ದಾರೆ. ನಾನು ಹೋಗಿ ಎಚ್ಚರಿಕೆ ನೀಡಿದ ನಂತರವೂ ತಾಯಂದಿರು ಸತ್ತಿದ್ದಾರೆ.

ಹತ್ತು ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 111 ನವಜಾತ ಶಿಶುಗಳು ಹಾಗೂ ಎಂಟು ತಿಂಗಳಲ್ಲಿ ಸುಮಾರು 28 ಬಾಣಂತಿಯರು ಸಾವನ್ನಪ್ಪಿದ್ದಾರೆ. ಮಹಿಳೆಯರಿಗೆ 2 ಸಾವಿರ ರೂ. ನೀಡುವ ಬದಲು ತಾಯಂದಿರ ಸಾವಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು.

ಕೋವಿಡ್‌ ಸಮಯದಲ್ಲಿ ರಾಹುಲ್‌ ಗಾಂಧಿ, ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ, ಜನರ ಬಳಿಗೆ ಹೋಗಿ ಟವೆಲ್‌ನಲ್ಲಿ ಕಣ್ಣೀರು ಒರೆಸಿಕೊಂಡರು. ಈಗ ತಾಯಂದಿರು ಸತ್ತಿರುವಾಗ ಜನಕಲ್ಯಾಣ ಸಮಾವೇಶ ಮಾಡಿದ್ದಾರೆ. ಆ ಸಮಾವೇಶದಲ್ಲಿ ರಾಜಕೀಯ ಮಾತಾಡುವುದು ಬಿಟ್ಟರೆ, ಜನರ ಪರವಾಗಿ ಮಾತಾಡಿಲ್ಲ.

28 ಔಷಧಿಗಳು ಕಳಪೆ ಎಂದಮೇಲೂ ಅದೇ ಕಂಪನಿಯಿಂದ ಔಷಧಿ ಖರೀದಿಸಲಾಗಿದೆ. ಮಕ್ಕಳನ್ನು ಉಳಿಸುವ ಕೆಲಸ ಮಾಡದೆ ನೂರು ಸಮಾವೇಶ ಮಾಡಿದರೂ ಶಾಪ ಹಾಗೂ ಪಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡಿದ ನಂತರವೂ ತಾಯಂದಿರು ಸಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗೆ ಸರ್ಕಾರದಲ್ಲಿ ಹಿಡಿತವಿಲ್ಲ ಎಂದರ್ಥ. ಈ ಸಾವಿನ ಹೊಣೆಯನ್ನು ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ ನಾಯಕರು ಜನರ ಹಿತ ಕಡೆಗಣಿಸಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ನಾನು ಈಗಾಗಲೇ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದೇನೆ. ಈ ಕುರಿತು ಲೋಕಾಯುಕ್ತಕ್ಕೆ ಪತ್ರ ಕೂಡ ಬರೆಯುತ್ತೇನೆ. ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡದೆ ಬಿಡುವುದಿಲ್ಲ.

ಸಿಎಂ ಸಿದ್ದರಾಮಯ್ಯ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಜಿಡಿಪಿಯಲ್ಲಿ ನಂಬರ್‌ 1 ಎನ್ನುವ ಸಿಎಂ ಸಿದ್ದರಾಮಯ್ಯ ಬಾಣಂತಿಯರ ಸಾವಿನಲ್ಲೂ ನಂಬರ್‌ 1 ಎಂದು ಹೇಳಲಿ ಎಂದರು.

ಒಕ್ಕಲಿಗ ಸ್ವಾಮೀಜಿ ವಿರುದ್ಧ ಪಟಾಪಟ್‌ ಎಂದು ಕ್ರಮ ಕೈಗೊಳ್ಳುವ ಕಾಂಗ್ರೆಸ್‌ ಸರ್ಕಾರ, ನ್ಯಾಯಾಲಯಕ್ಕೆ ಬೆಲೆ ಕೊಡಲ್ಲ ಎಂಬ ಮುಸ್ಲಿಂ ಮುಖಂಡನ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

ವಕ್ಫ್‌ ಭೂ ಕಬಳಿಕೆ ವಿರುದ್ಧ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ನೋವಿನಿಂದ ಮಾತಾಡಿರುವುದಕ್ಕೆ ಕಾಂಗ್ರೆಸ್‌ ಸರ್ಕಾರ ಪಟಾಪಟ್‌ ಎಂದು ತಕ್ಷಣದ ಕ್ರಮ ಕೈಗೊಂಡಿದೆ. ಮುಸ್ಲಿಂ ಲೀಗ್‌ನ ಮೌಲಾನ ಅಬು ಎಂಬುವನು ಸಂಸತ್ತು, ನ್ಯಾಯಾಲಯವನ್ನು ತಿರಸ್ಕರಿಸುತ್ತೇನೆಂದು ಮಾತಾಡಿದರೂ ಸರ್ಕಾರ ಕ್ರಮ ವಹಿಸಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕುಕ್ಕರ್‌ ಬ್ರದರ್‌ಗಳ ಮೇಲೆ ಪ್ರೀತಿ ಇದ್ದು, ಅವರ ವಿರುದ್ಧ ಕ್ರಮ ವಹಿಸುತ್ತಿಲ್ಲ ಎಂದರು.

ನಾನು ಎಂದಿಗೂ ನಮ್ಮ ಸ್ವಾಮೀಜಿಗಳ ಪರವಾಗಿಯೇ ನಿಲ್ಲುತ್ತೇನೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಒಮ್ಮೆ ಮುಸ್ಲಿಮರು ಬೇಕು, ಮತ್ತೊಮ್ಮೆ ಒಕ್ಕಲಿಗರು ಬೇಕು. ಇವರು ಸಿಎಂ ಸ್ಥಾನದ ಬಗ್ಗೆ ಮಾತಾಡಿದ್ದಕ್ಕೆ ಡಾ.ಜಿ.ಪರಮೇಶ್ವರ್‌ ಗರಂ ಆಗಿದ್ದಾರೆ ಎಂದರು.

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ ವ್ಯಕ್ತಿಯನ್ನೂ ಕಾಂಗ್ರೆಸ್‌ ಬ್ರದರ್‌ ಎನ್ನಬಹುದು. ಹೀಗಾದರೆ ಹಿಂದೂಗಳ ಕಥೆ ಏನೆಂದು ಚಿಂತೆಯಾಗುತ್ತದೆ. ಮುಸ್ಲಿಮ್‌ ಮುಖಂಡ ನ್ಯಾಯಾಲಯ ನಂಬಲ್ಲ ಎಂದು ಹೇಳಿದರೆ, ಕಾಂಗ್ರೆಸ್‌ನವರು ಬಾಬಾ ಸಾಹೇಬ್‌ ಅಂಬೇಡ್ಕರರ ಸಂವಿಧಾನದ ಪುಸ್ತಕ ಹಿಡಿದುಕೊಳ್ಳುತ್ತಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದರು.

ಗುಂಡಿಗಳ ಊರು

ರಾಜಧಾನಿ ಬೆಂಗಳೂರು ಗುಂಡಿಗಳ ಊರಾಗಿದೆ. ಒಂದೇ ಒಂದು ಗುಂಡಿ ಇಲ್ಲದ ರಸ್ತೆ ನಗರದಲ್ಲಿ ಇಲ್ಲ. ಬಿಬಿಎಂಪಿ ಆಯುಕ್ತರು ಲಕ್ಷಗಟ್ಟಲೆ ಗುಂಡಿ ಇದೆ, ಮುಚ್ಚಿದ್ದೇವೆ ಎನ್ನುತ್ತಾರೆ. ನಂತರ ಮತ್ತೆ ಗುಂಡಿಗಳ ಸಂಖ್ಯೆ ಹೇಳುತ್ತಾರೆ. ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಎಷ್ಟು ಅನುದಾನ ಬಿಬಿಎಂಪಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಲಿ. ಅದು ಬಿಟ್ಟು ʼನಮ್ಮ ತೆರಿಗೆ ನಮ್ಮ ಹಕ್ಕುʼ ಎಂದು ಹೇಳುತ್ತಾರೆ. ಹಾಗಾದರೆ ಬೆಂಗಳೂರಿನ ತೆರಿಗೆ ಯಾರ ಹಕ್ಕು? ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 100 ಕೋಟಿ ರೂ. ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಜಲಮಂಡಳಿ ಅಧ್ಯಕ್ಷರು ಎಲ್ಲ ಶಾಸಕರಿಗೆ ಪತ್ರ ಬರೆದು ದರ ಏರಿಕೆಗೆ ಸಹಕಾರ ನೀಡಲು ಕೋರಿದ್ದಾರೆ. ಹಾಲಿನ ದರ ಹಾಗೂ ಆಲ್ಕೋಹಾಲ್‌ ದರ ಹೆಚ್ಚಳಕ್ಕೆ ಸಿದ್ಧತೆ ನಡೆದಿದೆ. ಅರಣ್ಯ ಸಚಿವರು ನದಿ ನೀರಿಗೂ ತೆರಿಗೆ ವಿಧಿಸಲು ಮುಂದಾಗಿದ್ದಾರೆ. ಇನ್ನು ಸಮುದ್ರಕ್ಕೆ ತೆರಿಗೆ ವಿಧಿಸುವುದು ಬಾಕಿ ಇದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆಗಿನ ಸಭೆಯಲ್ಲಿ, ಎಲ್ಲರೂ ಒಂದಾಗಿ ಹೋಗುವ ಕುರಿತು ಸಲಹೆ ನೀಡಿದ್ದೇನೆ. ಇದನ್ನೇ ಬಿ.ಎಸ್‌.ಯಡಿಯೂರಪ್ಪ ಕೂಡ ಹೇಳಿದ್ದಾರೆ. ಎಲ್ಲವೂ ಸುಖಾಂತ್ಯವಾಗಲಿದೆ ಎಂದರು.

Exit mobile version