ದೊಡ್ಡಬಳ್ಳಾಪುರ (Doddaballapura): ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಅವುಗಳಲ್ಲಿ ಡಿಜಿಟಲ್ ಅರೆಸ್ಟ್ ನಂತಹ ಪ್ರಕರಣಗಳಿಂದ ನಾಗರಿಕರು ಜಾಗೃತರಾಗುವುದು ಅಗತ್ಯವಿದೆ ಎಂದು ಮಹಿಳಾ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮಧುಸೂದನ್ ಆರ್ ಹೇಳಿದರು.
ಅವರು ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ “ಸಮೂಹ ಮಾಧ್ಯಮ ಮತ್ತುಅಪರಾಧ ಪ್ರಕರಣಗಳು” ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಡಿಜಿಟಲ್ ಅರೆಸ್ಟ್ ಇತ್ತೀಚಿನ ಭಯಾನಕ ಸೈಬರ್ ಅಪರಾಧವಾಗಿದ್ದು, ಅಮಾಯಕ ನಾಗರಿಕರು ಬಲಿಪಶುಗಳಾಗುತ್ತಿದ್ದಾರೆ. ಆನ್‌ಲೈನ್ ವಂಚಕರಿಂದ ದಿನವಿಡಿ ಬಂಧನಕ್ಕೊಳಗಾಗಿ ಕೋಟಿ ರೂ.ನಷ್ಟು ಕಳೆದು ಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದ “ಹಿಂದು ಸ್ಥಾನ ಟೈಮ್ಸ್ ಕನ್ನಡ ಆವೃತ್ತಿಯ ಸಂಪಾದಕ ಘನಶ್ಯಾಮ್ ಡಿ.ಎಂ. ಅವರು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಸಂಭವಿಸುವ ಅಪರಾಧ ಮತ್ತು ಅಧಿಕಾರ ದುರುಪಯೋಗದ ಕುರಿತು ನಿಷ್ಠುರವಾಗಿ ವರದಿ ಮಾಡಿ ಸಾರ್ವಜನಿಕರಿಗೆ ತಿಳಿಸುವ ಜವಾಬ್ಧಾರಿಯನ್ನು ಸಮೂಹ ಮಾಧ್ಯಮ ಮಾಡುತ್ತಿದೆ.
ವಿದ್ಯಾರ್ಥಿಗಳು ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಂದ ದೂರ ಇರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸದಾಶಿವ ರಾಮಚಂದ್ರಗೌಡ ಮಾತನಾಡಿ, ಪರೀಕ್ಷೆಗಾಗಿ ನೋಟ್ಸ್ ಸಂಗ್ರಹಿಸುವುದು ಹಾಗೂ ಪ್ರತೀಷ್ಠೆಗಾಗಿ ಪದಕ ಪಡೆಯುವುದಷ್ಟೆ ಶಿಕ್ಷಣವಾಗಬಾರದು. ನಾಗರಿಕ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು, ದೈನಂದಿನ ಬದುಕಿನಲ್ಲಿಅಪರಾಧ ಕೃತ್ಯಗಳಿಂದ ಜಾಗೃತಗೊಂಡು ಪಾಲಕ ಮತ್ತು ಬೋಧಕ ವರ್ಗಕ್ಕೆಕೀರ್ತಿತರುವಂತರಾಗಬೇಕೆಂದು ಕಿವಿಮಾತು ಹೇಳಿದರು.
ಪತ್ರಿಕೋದ್ಯಮ ಉಪನ್ಯಾಸಕ ಡಾ. ಸತೀಶ ಕೆ.ಇಟಗಿ, ಐಕ್ಯೂಎಸಿ ಸಂಯೋಜಕ ಡಾ.ಗಂಗಾಧರಯ್ಯ ಬಿ.ಆರ್., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೋಭಾ ಮಲ್ಹಾರಿ, ಹಿರಿಯ ಪತ್ರಕರ್ತರಾದ ಎನ್‌ಎಮ್ ನಟರಾಜ, ಡಿ ಶ್ರೀಕಾಂತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.