Daily Story: ಒಬ್ಬ ರೈತನ ಬಳಿ ಎರಡು ಎತ್ತು ಗಳಿದ್ದವು. ಅವುಗಳಲ್ಲಿ ಒಂದು ಬಾಲವಿರುವ ಎತ್ತು. ಮತ್ತೊಂದು ಬಾಲವಿಲ್ಲದ ಎತ್ತು.
ಬಾಲವುಳ್ಳ ಎತ್ತು ಯಾವಾಗಲೂ ಬಾಲವಿಲ್ಲದ ಎತ್ತನ್ನು ಗೇಲಿ ಮಾಡುತ್ತಿತ್ತು. ಕೊಟ್ಟಿಗೆಯಲ್ಲಿ, ಸೊಳ್ಳೆಗಳು ಕಚ್ಚಿದಾಗಲೂ ತನ್ನ ಬಾಲದಿಂದ ತನಗೆ ಕಚ್ಚುತ್ತಿದ್ದ ಸೊಳ್ಳೆಗಳನ್ನು ದಿಕ್ಕಪಾಲು ಮಾಡಿ ಬಾಲವಿಲ್ಲದ ಎತ್ತಿನ ಸಂಕಟವನ್ನು ನೋಡಿ ನಗುತ್ತಿತ್ತು.
ಒಂದು ದಿನ ರೈತ ಧಾನ್ಯಗಳನ್ನು ಗಿರಣಿ ಮಾಡಿಸಿಕೊಂಡು ಬರುವುದಕ್ಕಾಗಿ ಎತ್ತಿನಬಂಡಿಯನ್ನು ಹೂಡಿದ. ದಾರಿಯಲ್ಲಿ ಬಂಡಿ ಸಾಗುತ್ತಿರುವಾಗ ಬಾಲವಿಲ್ಲದ ಎತ್ತು ಬಾಲವಿರುವ ಎತ್ತಿಗೆ ‘ನೋಡು ನಮ್ಮ ಒಡೆಯನ ಮುಖದ ಮೇಲೆ ಸೊಳ್ಳೆಯೊಂದು ಕೂತು ರಕ್ತ ಹೀರುತ್ತಿದೆ. ನನ್ನ ಬಳಿ ಬಾಲವಿದ್ದರೆ ಓಡಿಸುತ್ತಿದ್ದೆ. ನಮ್ಮೊಡೆಯನ ಮೇಲೆ ಮಮಕಾರವಿದ್ದರೆ ಆ ಸೊಳ್ಳೆಗೆ ನಿನ್ನ ಬಾಲದಿಂದ ಬಡಿದು ಓಡಿಸು’ ಎಂದು ಹೇಳಿತು.
ಬಾಲವಿರುವ ಎತ್ತು ವಿವೇಚನೆ ಇಲ್ಲದೆ ಆ ರೈತನ ಮುಖಕ್ಕೆ ಬಡಿಯಿತು. ಅದರಿಂದ ಸಿಟ್ಟಿಗೆದ್ದ ರೈತ ಕೋಲಿನಿಂದ ಎರಡೇಟು ಬಾರಿಸಿದ. ಬೇಗ ಹೋಗಲಿ ಎಂದು ಹೊಡೆಯುತ್ತಿರಬೇಕೆಂದು ಭಾವಿಸಿ ಓಡುವ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ರೈತನು ನಿಯಂತ್ರಿಸಲು ಹಗ್ಗವನ್ನು ಎಳೆದೆಳೆದು ಕೈ ನೋವು ಬಂತು.
ರೈತನ ಬಂಡಿ ನಿಯಂತ್ರಣ ತಪ್ಪಿ ಒಂದೆರಡಡಿ ಕಾಲುವೆಗೆ ಹೂತುಬಿಡ್ತು. ಬಾಲವಿರುವ ಎತ್ತು ಓಡಿ, ಓಡಿ ಸುಸ್ತಾಗಿ ಮಲಗಿಕೊಳ್ತು. ಎಷ್ಟೇ ಹೊಡೆದರೂ ಹೊಡೆತಕ್ಕೆ ಮೈ ಒಡ್ಡುತ್ತಿತ್ತು. ಇದರಿಂದ ಬೇಸತ್ತ ರೈತ ತನ್ನ ಚೂಪಾದ ಹಲ್ಲಿನಿಂದ ಬಾಲವನ್ನು ಕಚ್ಚಿ ಗಾಯ ಮಾಡಿದ.
ಕೊನೆಗೆ ಗಾಯ ವಾಸಿಯಾಗದೆ ಕಚ್ಚಿದ್ದಲ್ಲಿಗೆ ಬಾಲ ತುಂಡಾಗಿ ಅದು ಕೂಡ ಬಾಲವಿಲ್ಲದ ಎತ್ತಾಯಿತು. ಕೊಟ್ಟಿಗೆಯಲ್ಲಿ ಸೊಳ್ಳೆಗಳು ಮುತ್ತಿಕೊಳ್ಳುತ್ತಿದ್ದಾಗ ಬಾಲವಿಲ್ಲದ ಜೀವನ ತುಂಬಾ ಕಷ್ಟವಿದೆ ಎಂಬ ಅರಿವಾಯಿತು. ನನ್ನ ಗೆಳೆಯನನ್ನು ನಾನು ಗೇಲಿ ಮಾಡಬಾರದಿತ್ತೆಂದು ಕೊಂಡಿತು.
ಕೃಪೆ: ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಾಗಿಲ್ಲ)