Site icon Harithalekhani

ಸಿಎಂ ಹೇಳಿದ್ದೇ ಅಂತಿಮ, ಅದರ ಬಗ್ಗೆ ಮರುಪ್ರಶ್ನೆ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar)

ಬೆಂಗಳೂರು; “ನಾನು ಸಿಎಂ ಕುರ್ಚಿ ಹಾಗೂ ಪಕ್ಷಕ್ಕೆ ಸದಾ ನಿಷ್ಠನಾಗಿರುತ್ತೇನೆ. ಮುಖ್ಯಮಂತ್ರಿಗಳು ಹೇಳಿದ ಮೇಲೆ ಅದೇ ಅಂತಿಮ. ಅದರ ಬಗ್ಗೆ ಮರುಪ್ರಶ್ನೆಯೇ ಇಲ್ಲ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

ಸಿಎಂ ಹುದ್ದೆ ವಿಚಾರವಾಗಿ ಯಾವುದೇ ಒಪ್ಪಂದವಾಗಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿಗಳು ಹೇಳಿದ ಮೇಲೆ ಯಾವುದೇ ತಕರಾರು ಇಲ್ಲ. ಅವರು ಹೇಳಿದ್ದೇ ಅಂತಿಮ. ಅವರ ಹೇಳಿಕೆ ನಂತರ ಈ ವಿಚಾರವಾಗಿ ಯಾವುದೇ ವಾದ, ಚರ್ಚೆ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಪ್ರಕರಣದಲ್ಲಿ ಹುರುಳಿಲ್ಲ ಎಂದು ಸಾಬೀತು

ಮೂಡಾ ಪ್ರಕರಣ ವಿಚಾರವಾಗಿ ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಯಾವುದೇ ತನಿಖೆ ನಡೆದರೂ ಅದು ಗೌಪ್ಯವಾಗಿರಬೇಕು. ಏನಾದರೂ ಸತ್ಯಾಂಶವಿದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು. ನ್ಯಾಯಾಲಯಕ್ಕೆ ಸಲ್ಲಿಸುವ ಬದಲು ಮಾಧ್ಯಮಗಳಿಗೆ ನೀಡುತ್ತಾರೆ ಎಂದರೆ, ಅವರು ಈ ವಿಚಾರದಲ್ಲಿ ಎಷ್ಟು ಹತಾಶರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ.

ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸಾಬೀತಾಗುತ್ತಿದೆ. ಆದರೂ ಚಿಂತೆ ಇಲ್ಲ. ನಮ್ಮ ಕರ್ತವ್ಯ, ನಮ್ಮ ಸರ್ಕಾರ ಹಾಗೂ ಪಕ್ಷ ಹೋರಾಟ ಮಾಡುತ್ತದೆ. ನಮಗೆ ನ್ಯಾಯಾಲಯಗಳ ಮೇಲೆ ನಂಬಿಕೆ ಇದೆ” ಎಂದು ತಿಳಿಸಿದರು.

ಒಂದು ತನಿಖಾ ಸಂಸ್ಥೆ ಮತ್ತೊಂದು ತನಿಖಾ ಸಂಸ್ಥೆ ಮೇಲೆ ಪ್ರಭಾವ ಬೀರುತ್ತಿಲ್ಲವೇ ಎಂದು ಕೇಳಿದಾಗ, “ನನ್ನ ಮೇಲೂ ಇಡಿಯವರು ವಿಚಾರಣೆ ಮಾಡಿ, ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಆದರಿಸಿ ಕೋರ್ಟ್ ಏನೋ ಒಂದು ತೀರ್ಪನ್ನ ಕೊಟ್ಟಿದೆ. ಈ ಪ್ರಕರಣದಲ್ಲಿ ದುಡ್ಡು ತೆಗೆದುಕೊಳ್ಳೋದು, ಕೊಡೋದು ನಡೆದಿಲ್ಲ. ರೇಡ್ ಮಾಡಿದಾಗ ಹಣ ಸಿಕ್ಕಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಮನಿ ಎಲ್ಲಿ ಲಾಂಡರಿಂಗ್ ಆಯ್ತು? ಈ ಪ್ರಕರಣ ಆಡಳಿತ ವಿಚಾರವಾಗಿದೆ.

ಆಡಳಿತ ವಿಭಾಗವನ್ನ ಅವರು ವಿಚಾರಣೆ ಮಾಡಬೇಕು. ಅದನ್ನು ಬಿಟ್ಟು ತನಿಖಾ ಸಂಸ್ಥೆ ಮಾಧ್ಯಮಗಳಿಗೆ ಈ ವಿಚಾರ ಸೋರಿಕೆ ಮಾಡಿದರೆ ಹೇಗೆ? ಒಂದು ತನಿಖಾ ಸಂಸ್ಥೆ, ಮತ್ತೊಂಜದು ತನಿಖಾ ಸಂಸ್ಥೆಗೆ ನೀವು ಹೀಗೆ ಮಾಡಿ ಅಂತ ಹೇಳೋದನ್ನ ಹೊಸದಾಗಿ ನೋಡುತ್ತಿದ್ದೇನೆ. ನನ್ನ ಅನುಭವದಲ್ಲಿ ಇದೆನ್ನೆಲ್ಲ ಹೊಸದಾಗಿ ನೋಡುತ್ತಿದ್ದೇ. ಇದಕ್ಕೆ ಜನ ಉತ್ತರ ಕೊಡ್ತಾರೆ, ನಾವೂ ಉತ್ತರ ಕೊಡ್ತೀವಿ” ಎಂದು ತಿಳಿಸಿದರು.

ಸಮಾವೇಶಕ್ಕೆ ಯಾರೇ ಬಂದರೂ ಸಂತೋಷ

ಹಾಸನದ ಸಮಾವೇಶಕ್ಕೆ ಸ್ವಾಭಿಮಾನಿ ಒಕ್ಕೂಟದಿಂದ ಹೆಚ್ಚಿನ ಜನ ಬರುತ್ತಾರೆ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಅವರು ಬರಲಿ. ಎಲ್ಲಾ ವರ್ಗದ ಜನ ಬೆಂಬಲದಿಂದಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ಈ ಕಾರ್ಯಕ್ರಮಕ್ಕಾಗಿ ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಈ ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

ಸಮಾವೇಶದ ಸಿದ್ಧತೆ ಬಗ್ಗೆ ಕೇಳಿದಾಗ, “ಮಳೆ ಬರೋದು ಬೇಡ ಎಂದು ನಾನು ಹೇಳುವುದಿಲ್ಲ. ಮಳೆ ಬಂದರೆ ಏನೂ ಮಾಡಲು ಸಾಧ್ಯವಿಲ್ಲ. ಅದು ಪ್ರಕೃತಿ. ನಮ್ಮವರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ನಮ್ಮ ಸಮಾವೇಶ ಯಶಸ್ವಿಯಾಗುತ್ತದೆ ಎಂದು ಬಿಜೆಪಿಯವರು ಇಲ್ಲಸಲ್ಲದ ವಿಚಾರವನ್ನು ಮಾಧ್ಯಮಗಳ ಮೂಲಕ ಹರಿಬಿಡುತ್ತಿದ್ದಾರೆ” ಎಂದು ತಿಳಿಸಿದರು.

Exit mobile version