ಬೆಂಗಳೂರು: ಕೇರಳದ ಪವಿತ್ರ ಕ್ಷೇತ್ರ ಶಬರಿಮಲೆ (Sabarimala) ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆರಂಭಿಸಲಾಗಿದ್ದು ಆನ್ ಲೈನ್ ಬುಕ್ಕಿಂಗ್ ಭರ್ತಿಯಾಗಿದೆ. ಇನ್ನು ಏನಿದ್ದರೂ ಶಬರಿಮಲೆಗೆ ತೆರಳುವ ಭಕ್ತರು ಸ್ಥಳದಲ್ಲೇ ಟಿಕೆಟ್ ಪಡೆದು ಅಯ್ಯಪ್ಪನ ದರ್ಶನ ಪಡೆಯಬೇಕಾಗಿದೆ.
ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಮ್ಮ ಹೆಸರುಗಳನ್ನು ಆನ್ ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ವೋಲ್ಲೋ ಬಸ್ ಸೇವೆ: ಕೆಎಸ್‌ಆರ್‌ಟಿಸಿ ಕರ್ನಾಟಕದ ಅಯ್ಯಪ್ಪಸ್ವಾಮಿ ಭಕ್ತರಿಗೆ ಮೊದಲ ಬಾರಿಗೆ ಬೆಂಗಳೂರಿನಿಂದ ಶಬರಿ ಮಲೆಗೆ ವೋಲ್ಲೋ ಬಸ್ ಸೇವೆ ಆರಂಭಿಸಿದೆ.
ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ಶಬರಿ ಮಲೆ ಯಾತ್ರೆ ಕೈಗೊಳ್ಳುವ ಅಯ್ಯಪ್ಪ ಭಕ್ತರಿಗೆ ಅನುಕೂಲಕ್ಕಾಗಿ ಹೊಸದಾಗಿ ವೋಲ್ಲೋ ಬಸ್‌ಸೇವೆ ಆರಂಭಿಸಿದ್ದು, ನ.29 ರಿಂದ ಹೊಸ ವೋಲ್ಲೋ ಬಸ್ ಸಂಚಾರ ಆರಂಭವಾಗಿದೆ.
ಬೆಂಗಳೂರಿನಿಂದ-ನೀಲಕ್ಕಲ್‌ವರೆಗೆ ಈ ಬಸ್ ಸಂಚಾರ ನಡೆಸಲಿದ್ದು, ಶಾಂತಿನಗರ ಬಸ್ ನಿಲ್ದಾಣ ದಿಂದ ಮಧ್ಯಾಹ್ನ 1.50ಕ್ಕೆ, ಮೈಸೂರು ರಸ್ತೆ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ 2.20ಕ್ಕೆ ಬಸ್ ಹೊರಟು, ಮರುದಿನ ಬೆಳಗ್ಗೆ 6.45ಕ್ಕೆ ನೀಲಕ್ಕಲ್ ತಲುಪುತ್ತದೆ. ನೀಲಕ್ಕಲ್‌ನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 10ಕ್ಕೆ ಬೆಂಗಳೂರು ತಲುಪಲಿದೆ.
ಮೈಸೂರಿನಿಂದಲೂ ಸಹ ಪ್ರಯಾಣಿ ಕರು ಟಿಕೆಟ್ ಕಾಯ್ದಿರಿಸಬಹುದಾಗಿದ್ದು, ಮೈಸೂರಿನಿಂದ ಸಂಜೆ 5 ಗಂಟೆಗೆ ಐರಾವತ ವೋಲ್ಲೋ ಬಸ್ ಹೊರಡಲಿದೆ.
ನೀಲಕ್ಕಲ್ ನಿಂದ (ಪಂಪಾ-ಶಬರಿಮಲೆ) ಐರಾವತ್ ವೋಲ್ಲೋ ಸೇವೆಯು ಪ್ರತಿದಿನ ಸಂಜೆ 8 ಗಂಟೆಗೆ ಹೊರಡುತ್ತದೆ ಮತ್ತು ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರನ್ನು ತಲುಪುತ್ತದೆ.
ನೆರೆಯ ರಾಜ್ಯಗಳಲ್ಲಿನ ಖಾಸಗಿ ಬುಕ್ಕಿಂಗ್ ಕೌಂಟರ್‌ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)