Site icon Harithalekhani

ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಪುತ್ಥಳಿ ವಿರೂಪ.. ವ್ಯಾಪಕ ಆಕ್ರೋಶ| Shivakumara Swami

ಬೆಂಗಳೂರು: ನಗರದ ಗಿರಿನಗರ ಬಳಿಯಿರುವ ಸಿದ್ಧಗಂಗಾ ಮಠದ ಲಿಂಗೈಕ್ಯ ಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ (Shivakumara Swami) ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.

ಪುತ್ಥಳಿ ವಿರೂಪಗೊಂಡಿರುವ ಸುದ್ದಿ ಹರಡುತ್ತಿದ್ದಂತೆಯೇ ಶ್ರೀಗಳ ಅಸಂಖ್ಯಾತ ಭಕ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಪುತ್ಥಳಿಯ ಹಣೆಗೆ ಕಲ್ಲು ಹೊಡೆದು ವಿಕೃತಗೊಳಿಸಲಾಗಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದ ವೀರಭದ್ರ ನಗರದಲ್ಲಿರುವ ಪುತ್ತಳಿ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ ಎಂದು ವರದಿಯಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಸುಜಯ್ ಕುಮಾರ್, ಪೂಜನೀಯ ಶ್ರೀ ಪುತ್ಥಳಿ ವಿರೂಪಗೊಳಿಸಿದವರನ್ನು ಕೂಡಲೇ ಪತ್ತೆಹಚ್ಚಿ, ಅವರ ಮೇಲೆ ಕಾನೂನಿನ ಕ್ರಮಕ್ಕೆ ಮುಂದಾಗಬೇಕೇಂದು ಸರಕಾರವನ್ನು ಮತ್ತು ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.

ಪ್ರತಿಯೊಬ್ಬರೂ ಭಕ್ತಿಯಿಂದ ಗೌರವಿಸುವ ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿರುವ ಶ್ರೀಗಳಿಗೆ ಅಪಚಾರವೆಸಗಿರುವುದು ದಿಗ್ಬ್ರಮೆ ತರುವ ವಿಷಯ ಎಂದಿದ್ದಾರೆ.

ವೀರಶೈವಲಿಂಗಾಯತ ಮುಖಂಡ ಲೋಕೇಶ್ ನಾಗಸಂದ್ರ ಮಾತನಾಡಿ, ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ನಡೆದಾಡಿದ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಪುತ್ಥಳಿ ವಿರೂಪಗೊಳಿಸಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ‌.

Exit mobile version