ಬೆಂಗಳೂರು: ಕರ್ನಾಟಕದಲ್ಲಿ ಸೀಮಿತವಾಗಿದ್ದ ಬಿಜೆಪಿ (BJP) ಬಣ ಬಡಿದಾಟ ಇದೀಗ ರಾಷ್ಟ್ರ ರಾಜಧಾನಿಗೆ ಶಿಫ್ಟ್ ಆಗಿದೆ.
ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡುತ್ತಿದ್ದಂತೆ, ರಾಜ್ಯದಲ್ಲಿ ಆರಂಭವಾಗಿರುವ ಅಂತಃಕಲಹವನ್ನು ದೆಹಲಿ ಮಟ್ಟದಲ್ಲಿಯೇ ಅಂತ್ಯ ಹಾಕುವ ಲೆಕ್ಕಾಚಾರದಲ್ಲಿ ಯತ್ನಾಳ್ ಬಣದ ನಾಯಕರು ಸಜ್ಜಾಗಿದ್ದಾರೆ.
ಸೋಮವಾರ ಬೆಳಗ್ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಿ 10 ದಿನದಲ್ಲಿ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ ವಿಜಯೇಂದ್ರ, ಶೋಕಾಸ್ ನೋಟಿಸ್ ಅನ್ನು ಸ್ವಾಗತಿಸಿದರೆ, ಯತ್ನಾಳ್ ಮಾತ್ರ ಅಪ್ಪನ ಸಹಿಯನ್ನೆ ನಕಲು ಮಾಡಿದ ಮಗ ನೋಟೀಸ್ ಮಾಡಲ್ವೇ..? ಈ ನೋಟಿಸ್ ನಕಲಿಯಾಗಿರಬಹುದು ಎನ್ನುವ ಮೂಲಕ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.
ಮೇಲ್ನೋಟಕ್ಕೆ ನೋಟಿಸ್ ನೀಡಿರುವುದು ವಿಜಯೇಂದ್ರ ಬಣಕ್ಕೆ ಮೇಲುಗೈ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ನೋಟಿಸ್ ಮೂಲಕ ಯಡಿಯೂರಪ್ಪ ಅವರನ್ನು ಸಮಾಧಾನಿಸುವುದಕ್ಕೆ ಮಾತ್ರ ಇದು ಸೀಮಿತವಾಗಲಿದೆ ಎನ್ನಲಾಗುತ್ತಿದೆ.
ಕೇಂದ್ರ ತಂಡ ದೌಡು
ಬಿಜೆಪಿಯಲ್ಲಿ ಸಂಘಟನಾ ಪರ್ವ ನಡೆಯುತ್ತಿದೆ. ರಾಜ್ಯಾದ್ಯಂತ ಅಭಿಯಾನ ಬಿರುಸಿನಿಂದ ಸಾಗಿದ್ದು, ಮೌಲ್ಯಮಾಪನಕ್ಕೆ ಕೇಂದ್ರ ದಿಂದ ತಂಡ ಬೆಂಗಳೂರರಿಗೆ ಬಂದಿದೆ. ಈ ಬಗ್ಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತಾಡಿದ ವಿಜಯೇಂದ್ರ, ಕೇಂದ್ರ ಸಂಘಟನಾ ಕಾರ್ಯದರ್ಶಿ ತರುಣ್ ಚುಗ್ ಆಗಮಿಸಿದ್ದಾರೆ. ಸದಸ್ಯತ್ವ ಅಭಿಯಾನದ ಬಗ್ಗೆ ಎಲ್ಲರೂ ಸುದೀರ್ಘ ಚರ್ಚೆ ನಡೆಸಲಿದ್ದೇವೆ. ಈ ಭೇಟಿಗೆ ರಾಜಕೀಯ ಬಣ್ಣ ಬೇಡ ಎಂದು ತಿಳಿಸಿದರು.
ಇದನ್ನೂ ಓದಿ; ಅಖಂಡ BJP ನಮ್ಮೊಂದಿಗಿದೆ.. ಅಪ್ಪಾಜಿ ಅನ್ನೋ ನನ್ಮಕ್ಕಳು ಅವರೊಂದಿಗಿದ್ದಾರೆ: ಯತ್ನಾಳ್ ಗುಡುಗು
ರಾಜ್ಯ ಬಿಜೆಪಿಯಲ್ಲಿನ ಅಂತರಿಕ ಭಿನ್ನಾಭಿಪ್ರಾಯದ ವಿಷಯಗಳನ್ನ ಚರ್ಚಿಸುವುದಿಲ್ಲ. ಇದರಲ್ಲಿ ರಾಜಕೀಯ ಬೇಡ, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಮುಂದೆ ಅಸಮಾಧಾನ ಇರುವವರು ಮಾತನಾಡುತ್ತಾರೆ. ಇವತ್ತಿನ ಸಭೆಯಲ್ಲಿ ಕೇವಲ ಸಂಘಟನೆ ವಿಚಾರ ಚರ್ಚೆ ಆಗಲಿದೆ ಎಂದು ಹೇಳಿದರು.
ಯಾವುದೇ ರಾಜಕೀಯ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಎಲ್ಲರೂ ಚರ್ಚಿಸಬಹುದು. ಜಿಲ್ಲಾಧ್ಯಕ್ಷರು ಅವರ ಅಭಿಪ್ರಾಯ ಹೇಳಿಕೊಳ್ಳಲು ಸ್ವಾತಂತ್ರ್ಯ ಇದೆ. ಆದರೆ ಇವತ್ತಿನ ಕಾರ್ಯಕ್ರಮದಲ್ಲಿ ಕೇವಲ ಸಂಘಟನೆ ವಿಚಾರ ಚರ್ಚೆಗೆ ಮಾತ್ರ ಆದ್ಯತೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.