ಬೆಂಗಳೂರು: ಈ ಹಿಂದಿನ ಸರ್ಕಾರದ ವೇಳೆ ಭ್ರಷ್ಟಾಚಾರದ ಸುಳಿಗೆ ಸಿಲುಕಿದ್ದ KSDL ಸಂಸ್ಥೆಯು ನಮ್ಮಸರಕಾರ ಸುಧಾರಣಾ ಕ್ರಮಗಳ ಪರಿಣಾಮ ಇದೀಗ ದಾಖಲೆ ಲಾಭಕ್ಕೆ ಮರಳಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಸಂಸ್ಥೆಯ ಆಡಳಿತ ಸುಧಾರಣೆ, ನೂತನ ಉತ್ಪನ್ನಗಳು, ಗುಣಮಟ್ಟ, ಮಾರುಕಟ್ಟೆಯ ತಂತ್ರಗಳನ್ನು ಅಳವಡಿಸಿಕೊಂಡ ಪರಿಣಾಮ ವರ್ಷದಿಂದ ವರ್ಷಕ್ಕೆ ಸಂಸ್ಥೆ ಹೆಚ್ಚಿನ ಲಾಭ ಗಳಿಸುತ್ತಿದ್ದು ರಾಜ್ಯದ ಬೊಕ್ಕಸ ಶ್ರೀಮಂತಗೊಳಿಸುತ್ತಿದೆ.
ಕಳೆದ ವರ್ಷ 1375 ಕೋಟಿ ರೂಪಾಯಿ ವಹಿವಾಟು ನಡೆಸಿದ್ದ ಸಂಸ್ಥೆ ಪ್ರಸಕ್ತ ವರ್ಷ ಈಗಾಗಲೇ 1500 ಕೋಟಿ ಮೀರಿ ವಹಿವಾಟು ನಡೆಸಿದೆ. ಇದಲ್ಲದೆ ಸಂಸ್ಥೆಯ ಉತ್ಪಾದನೆ ಮತ್ತು ಮಾರುಕಟ್ಟೆ ಸಾಮರ್ಥ್ಯ ವಿಸ್ತರಿಸಿಕೊಳ್ಳಲು ವಿನೂತನ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಪ್ರೋತ್ಸಾಹಿಸಿ, ಲಾಭದತ್ತ ಮುನ್ನಡೆಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಕಾರ್ಯತಂತ್ರ ರೂಪಿಸಿದೆ.
2032ರ ವೇಳೆಗೆ KSDL ವಾರ್ಷಿಕ ವಹಿವಾಟಿನ ಗುರಿ ಒಂದು ಬಿಲಿಯನ್ ಡಾಲರ್
ಶತಮಾನದ ಇತಿಹಾಸವಿರುವ ನಮ್ಮ ನಾಡಿನ ಹೆಮ್ಮೆಯ KSDL ಸಂಸ್ಥೆಯ ವಾರ್ಷಿಕ ವಹಿವಾಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ 2032ರ ವೇಳೆಗೆ ರೂ 8,000 ಕೋಟಿ (1 ಬಿಲಿಯನ್ ಡಾಲರ್) ಗೆ ಏರಿಸುವ ಗುರಿಯಿದೆ.
ಭ್ರಷ್ಟಾಚಾರದಿಂದ ತುಂಬಿ ನಷ್ಟದ ಹಾದಿಯಲ್ಲಿದ್ದ ಈ ಸಂಸ್ಥೆಗೆ ನಾನು ಸಚಿವನಾದ ನಂತರ ಕಾಯಕಲ್ಪ ನೀಡಿ, ಕಾರ್ಯತಂತ್ರ ರೂಪಿಸಿದ್ದರ ಪರಿಣಾಮ ಕಳೆದ ಒಂದು ವರ್ಷದಿಂದ ಲಾಭದಾಯಕವಾಗಿ ಮುನ್ನಡೆಯುತ್ತಿದೆ.
ಸಂಸ್ಥೆಯ ಯಶಸ್ಸಿಗೆ ಶ್ರಮಿಸುತ್ತಿರುವ ಅಧ್ಯಕ್ಷ ಅಪ್ಪಾಜಿ ನಾಡಗೌಡರು ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಹಾಗೂ ತಂಡದ ಕಾರ್ಯಗಳು ಶ್ಲಾಘನೀಯ. ನಮ್ಮ ಬೆಂಬಲ ನಿರಂತರ ಎಂದಿದ್ದಾರೆ.