ದೊಡ್ಡಬಳ್ಳಾಪುರ; ಫೆಂಗಲ್ ಚಂಡಮಾರುತವು (Cyclone Fengal) ನಿನ್ನೆ ಅಂದರೆ ಡಿಸೆಂಬರ್ 1 ರಂದು ದಕ್ಷಿಣದ ರಾಜ್ಯಗಳಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಭಾರೀ ರಾದ್ಧಾಂತ ಸೃಷ್ಟಿಸಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಡಿಸೆಂಬರ್ 2, 3 ಮತ್ತು 4 ರಂದು ಕರ್ನಾಟಕದ ದಕ್ಷಿಣ ಒಳನಾಡು, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ನಿನ್ನೆ ಬೆಳಗ್ಗೆಯಿಂದ ಮಳೆಯಾಗುತ್ತಿದ್ದು, ಇಂದು ಬೆಳಗ್ಗೆಯೂ ಮುಂದುವರಿದಿದೆ.
ದೊಡ್ಡಬಳ್ಳಾಪುರದಲ್ಲಿ ಅವಾಂತರ
ದೊಡ್ಡಬಳ್ಳಾಪುರದಲ್ಲಿ ಕೂಡ ಫೆಂಗಲ್ ಚಂಡಮಾರುತದ ಪರಿಣಾಮ ಬೀರಿದ್ದು, ಶೀತ ಗಾಳಿ ಹಾಗೂ ತುಂತುರು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸದಾ ಜನಸಂದಣಿಯಿರುವ ರಸ್ತೆಗಳಲ್ಲಿ ಬಿಕೋ ಎನ್ನುತ್ತಿದ್ದವು. ಶೀತಗಾಳಿಗೆ ತತ್ತರಿಸಿರುವ ಸಾರ್ವಜನಿಕರು ಬೆಚ್ಚಗಿನ ಉಡುಪುಗಳಿಗೆ ಮೊರೆ ಹೋಗಿರುವ ಜನರು ಜಿಟಿ ಮಳೆಯಿಂದ ದಿನನಿತ್ಯದ ಕೆಲಸಗಳಿಗೆ ಮನೆಯಿಂದ ತೆರಳುತ್ತಿರುವುದು ಮಾಮೂಲಿಯಾಗಿದೆ.
ವಿದ್ಯುತ್ ಪೂರೈಕೆ ಸ್ಥಗಿತ
ಇನ್ನೂ ದೊಡ್ಡಬಳ್ಳಾಪುರ ನಗರದ ಮತ್ತು ಗ್ರಾಮಾಂತರ ಪ್ರದೇಶದ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಜಿಟಿಜಿಟಿ ಮಳೆಯ ನಡುವೆ ವಿದ್ಯುತ್ ಪೂರೈಕೆ ಸ್ಥಗಿತ ಸಾರ್ವಜನಿಕರನ್ನು ಪರದಾಡುವಂತೆ ಮಾಡಿದೆ.
ಗುಂಡಮಗೆರೆ ವಿದ್ಯುತ್ ಉಪ ಕೇಂದ್ರದಿಂದ ಪೂರೈಕೆಯಾಗುವ ಅನೇಕ ಗ್ರಾಮಗಳಲ್ಲಿ ಶನಿವಾರ ಹಾಗೂ ಭಾನುವಾರ ರಾತ್ರಿ ಸಂಪೂರ್ಣ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತು. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಸಮರ್ಪಕ ಉತ್ತರ ದೊರಕಲಿಲ್ಲ.
ಬಸ್ ವ್ಯವಸ್ಥೆ ಅಸ್ತವ್ಯಸ್ತ
ದೊಡ್ಡಬಳ್ಳಾಪುರದಲ್ಲಿ ಮಳೆಯ ಕಾರಣ ಸಾರಿಗೆ ಬಸ್ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಾರದೆ ವಿದ್ಯಾರ್ಥಿಗಳು, ಪ್ರಯಾಣಿಕರು ಕಾದು ನಿಲ್ಲುವಂತಾಗಿದೆ ಎಂದು ವಿದ್ಯಾರ್ಥಿ ಶಾಹಿಲ್ ಜೈನ್ ಬೇಸರ ವ್ಯಕ್ತಪಡಿಸಿದರು.
ಅಂಗನವಾಡಿಗಳಿಗೆ ರಜೆ
ಚಂಡಮಾರುತದ ಎಫೆಕ್ಟ್‌ನಿಂದ ಜಿಲ್ಲೆಯಲ್ಲಿ ನಿರಂತರವಾಗಿ ಜಡಿ ಮಳೆ ಹಾಗೂ ಶೀತಗಾಳಿಯ ಹಿನ್ನೆಲೆಯಲ್ಲಿ ನಿರಂತರವಾಗಿ ಜಿಲ್ಲೆಯಲ್ಲಿ ಮಳೆಸುರಿಯುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ಶಿವಶಂಕರ್ ಸೋಮವಾರ ರಜೆ ಘೋಷಿಸಿದ್ದಾರೆ.
ಅಂತೆಯೇ ನಗರ ವ್ಯಾಪ್ತಿಯ ಕೆಲ ಖಾಸಗಿ ಶಾಲೆಗಳು ರಜೆ ಘೋಷಿಸಿವೆ. ಆದರೆ ಸರ್ಕಾರಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸದ ಪರಿಣಾಮ ಪುಟಾಣಿ ಮಕ್ಕಳು ರೈನ್ ಕೋಟ್ ಧರಿಸಿ, ರಜೆ ನೀಡದ ಅಧಿಕಾರಿಗಳನ್ನು ಶಪಿಸುತ್ತಾ ಮಳೆಯಲ್ಲಿಯೇ ಶಾಲೆಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಪೋಷಕ ರಮೇಶ್, ಫೆಂಗಲ್ ಸೈಕ್ಲೋನ್ ಜಿಟಿ ಮಳೆಯ ಕಾರಣ ಹಾಗೂ ವಿಪರೀತ ಚಳಿ ಇರುವ ಹಿನ್ನೆಲೆಯಲ್ಲಿ ಸೋಮವಾರ ಒಂದು ದಿನ ಕನಿಷ್ಠ ಒಂದರಿಂದ ಐದನೇ ತರಗತಿಯ ವರೆಗೆ ರಜೆ ಘೋಷಿಸಬೇಕಿತ್ತು ಎಂದರು.
ಶೀತ, ಗಾಳಿ ಮುನ್ನೆಚ್ಚರಿಕೆ ವಹಿಸಲು ಡಿ.ಸಿ. ಮನವಿ
ಜಿಲ್ಲೆಯಾದ್ಯಂತ ತುಂತುರು ಮಳೆ ಹಾಗೂ ಶೀತ,ಗಾಳಿ ಹಿನ್ನೆಲೆಯಲ್ಲಿ ಮಕ್ಕಳು ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಶಿವಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಫೆಂಗಲ್ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿಯೂ ಅತಿಯಾದ ಛಳಿ, ಶೀತಗಾಳಿ ಬೀಸುತ್ತಿದ್ದು, ಸಾರ್ವಜನಿಕರು ಬೆಚ್ಚಗಿನ ಉಡುಪುಗಳನ್ನು ಧರಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ಅವಶ್ಯವಿದ್ದರಷ್ಟೇ ಮನೆಯಿಂದ ಹೊರ ಹೋಗುವುದು.
ವಯೋವೃದ್ದರು ಅನಾರೋಗ್ಯ ಪೀಡಿತರು ಆದಷ್ಟು ಮನೆಯಲ್ಲಿಯೇ ಇದ್ದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.
ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಕೃಷಿಕರು ಮುಂಜಾಗ್ರತೆ ವಹಿಸುವ ಮೂಲಕ ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮನವಿ ಮಾಡಿದ್ದಾರೆ.