ಬೆಂಗಳೂರು: ಫೆಂಗಲ್ ಚಂಡಮಾರುತದ (Cyclone Fengal) ಪರಿಣಾಮ ಕಳೆದೆರಡು ದಿನಗಳಿಂದ ರಾಜ್ಯದ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ನೈಋುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ಕೆಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ.
ಹೀಗಾಗಿ ಹಲವು ಕಡೆಗಳಲ್ಲಿ ಜನಜೀವನ ಸಂಕಷ್ಟಕ್ಕೀಡಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಬೆಳ್ಳಂಬೆಳ್ಳಿಗೆ ಶುರುವಾಗುವ ಜಿಟಿ ಜಿಟಿ ಮಳೆ ತಡ ರಾತ್ರಿಯವರೆಗೂ ಕುಟುಕುತ್ತಿದೆ. ಹೀಗಾಗಿ ಈ ಮಳೆಯಿಂದಾಗಿ ಶಾಲಾ ಹಾಗೂ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ನಾಳೆಯೂ ಸಹ ಮಳೆಯ ಮುನ್ಸೂಚನೆ ಇರುವುದರಿಂದ ರಾಜ್ಯದ ಕೆಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯ ಮಾಡಲಾಗಿದೆ. ನಿರಂತರ ಜಡಿ ಮಳೆ ಹಾಗೂ ವಿಪರೀತ ಚಳಿ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ವ್ಯಾಪಕವಾಗಿ, ಚಳಿಯ ವಾತಾವರಣ ಮಿತಿಮೀರಿದೆ. ಶಾಲೆಗಳಲ್ಲಿ ನೆಲದಲ್ಲಿ ಮಕ್ಕಳು ಕೂರಲಾಗದ ತಂಡಿ ಕಾಡುತ್ತಿದೆ. ಆದಾಗ್ಯೂ ರಜೆ ನೀಡದೆ ಇರುವುದು ಮಕ್ಕಳು ತೊಂದರೆ ಎದುರಿಸುವಂತಾಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಪೋಷಕರದ್ದಾಗಿದ್ದು, ಹೊಣೆ ಯಾರದು ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ಕಳೆದೆರಡು ದಿನಗಳಲ್ಲಿ ಹಲವು ಜಿಲೆಗಳಲ್ಲಿ ತುಂತುರು ಮಳೆಯಾಗುತ್ತಿದ್ದು ನಾಳೆ ಮಾತ್ರ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಾಳೆ ರಜೆ ನೀಡಲಾದ ಜಿಲ್ಲೆಗಳು: ಚಿಕ್ಕಬಳ್ಳಾಪುರ, ಕೋಲಾರ, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಾಮರಾಜನಗರ, ಚಿಕ್ಕಮಂಗಳೂರು ಹಾಗೂ ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. (ಈ ಕ್ಷಣದ ಮಾಹಿತಿ ಅನ್ವಯ)