Site icon Harithalekhani

ಬೆಳೆಹಾನಿ: ರೈತರಿಗೆ ಕೃಷ್ಣ ಬೈರೇಗೌಡ ಗುಡ್ ನ್ಯೂಸ್..!| krishna byre gowda

ಬೆಂಗಳೂರು: ಹಿಂಗಾರು ಮಳೆ ಅವಧಿಯಲ್ಲಿ ರಾಜ್ಯಾದ್ಯಂತ 1,58,087 ಹೆಕ್ಟೇ‌ರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಮುಂದಿನ ಒಂದು ವಾರ ದಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೂ ಪರಿಹಾರ ಹಣ ಜಮೆಯಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ (krishna byre gowda) ಅವರು ತಿಳಿಸಿದರು.

ಶುಕ್ರವಾರ ವಿಕಾಸಸೌಧದಿಂದ ವಿಡಿಯೊ ಕಾನ್ಸರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಡೇಟಾ ಎಂಟ್ರಿ ಕೆಲಸಗಳೂ ಮುಕ್ತಾಯದ ಹಂತದಲ್ಲಿದೆ.

120 ಕೋಟಿ ರೂ. ವರೆಗೆ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೂ ಹಣ ಜಮೆ ಆಗಲಿದೆ ಎಂದು ತಿಳಿಸಿದರು.

ಮುಂದುವರಿದು, ಜಿಲ್ಲಾಧಿಕಾರಿಗಳ ಖಾತೆಯಲ್ಲೇ 642 ಕೋಟಿ ರೂ. ಹಣ ಲಭ್ಯವಿದ್ದು, ಈ ಹಣದಲ್ಲೇ ಪರಿಹಾರ ಶೀಘ್ರ ವಿತರಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ 77,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು.

ಕೆಲವಡೆ ಮನೆ ಕುಸಿದಿದ್ದವು, ಕೆಲವೆಡೆ ಪ್ರಾಣ ಹಾನಿಯಂತಹ ಘಟನೆಗಳೂ ಸಂಭವಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಒಟ್ಟಾರೆ 162 ಕೋಟಿ ರೂ. ಹಣ ಪರಿಹಾರವಾಗಿ ರೈತರ ಖಾತೆಗಳಿಗೆ ಈಗಾಗಲೇ ಜಮೆ ಮಾಡಲಾಗಿದೆ ಎಂದರು.

Exit mobile version