ದೊಡ್ಡಬಳ್ಳಾಪುರ (Doddaballapura): ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯವನ್ನು ಮತ್ತು ಜ್ಞಾನದ ಮಟ್ಟವನ್ನು ಹೆಚ್ಚಿಸಲು ರಸಪ್ರಶ್ನೆ ಸ್ಪರ್ಧೆಗಳು ಸಹಕಾರಿ ಆಗುತ್ತವೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು.
ತಾಲ್ಲೂಕಿನ ಕನಸವಾಡಿ ನೇತಾಜಿ ಪ್ರೌಢಶಾಲೆಯಲ್ಲಿ ನಡೆದ ಅಂತರ ಪ್ರೌಢಶಾಲೆ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ರಸ ಪ್ರಶ್ನೆಗಳು ಮನಸ್ಸಿನ ಕ್ರೀಡೆಗಳಾಗಿವೆ.
ವಿದ್ಯಾರ್ಥಿಗಳ ಜ್ಞಾನ, ಸಾಮರ್ಥ್ಯ ಮತ್ತು ಕೌಶಲ್ಯದ ಬೆಳವಣಿಗೆಯನ್ನು ಅಳೆಯಲು ಮತ್ತು ಮೌಲ್ಯಮಾಪನ ಮಾಡಲು ರಸಪ್ರಶ್ನೆಗಳನ್ನು ಬಳಸಬಹುದಾಗಿದೆ ಎಂದರು.
ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತ ಆಗಬಾರದು. ಸ್ಥಳೀಯ ಪರಿಸರದ ಜ್ಞಾನವನ್ನು ಅರಿತಿರಬೇಕು. ನಮ್ಮ ಸುತ್ತಮುತ್ತಲ ಕಲೆ, ಸಾಹಿತ್ಯ, ಸಂಸ್ಕೃತಿಗಳ ಪರಿಚಯ ಇರಬೇಕು. ನಮ್ಮ ಜ್ಞಾನ, ವಿಜ್ಞಾನ ಮತ್ತು ಸಂಶೋಧನೆಗಳು ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು.
ಮಾನವೀಯ ಸಂಬಂಧಗಳನ್ನು ವೃದ್ದಿಗೊಳಿಸಬೇಕು. ಅಭಿವೃದ್ಧಿಯೊಂದಿಗೆ ಜನತೆಯ ಜೀವನದ ಗುಣಮಟ್ಟ ಸುಧಾರಣೆ ಆಗಬೇಕಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೈಯೀದ್ ಅನೀಸ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭೆಗೆ ಮನ್ನಣೆ ಇದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದಾಗಿದೆ. ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಗಳನ್ನು ಕಲ್ಪಿಸಬೇಕು ಜವಾಬ್ದಾರಿಯನ್ನು ವಿದ್ಯಾಸಂಸ್ಥೆಗಳು ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನೇತಾಜಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ವಸಂತರಘು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸೋಮಶೇಖರ್, ನೇತಾಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಟಿ.ರಂಗಸ್ವಾಮಿ, ವಾಣಿಜ್ಯ ತೆರಿಗೆ ಅಧಿಕಾರಿ ಟಿ.ಸಿ.ವೆಂಕಟಾಚಲಪತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಿ.ಶಶಿಶೇಖರಯ್ಯ, ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಕಾರ್ಯದರ್ಶಿ ಚೌಧರಿ, ವಿವಿಧ ಪ್ರೌಢಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜೇತರು: ಕೆ.ಎಂ ನವ್ಯ ಮತ್ತು ಡಿ.ಹರ್ಷಿತಾ ಚಿಕ್ಕನಾಯಕನಹಳ್ಳಿ ಕಿತ್ತೂರುರಾಣಿ ಚೆನ್ನಮ್ಮ ವಸತಿ ಪ್ರೌಢ ಶಾಲೆ ಪ್ರಥಮ ಸ್ಥಾನ, ಟಿ.ಚಿರಂಜೀವಿ ಮತ್ತು ಎಸ್.ರಾಮು ದೊಡ್ಡಬಳ್ಳಾಪುರ ಸರಸ್ವತಿ ಪ್ರೌಢಶಾಲೆ ದ್ವಿತೀಯ ಸ್ಥಾನ, ದರ್ಶನ್ ಎನ್.ಗೌಡ ಮತ್ತು ಡಿ.ಸಾಯಿಆನಂದರಾವ್ ದೊಡ್ಡಬಳ್ಳಾಪುರ ದೇವರಾಜ ಅರಸು ಪ್ರೌಢಶಾಲೆ ತೃತೀಯ ಸ್ಥಾನ ಪಡೆದರು.
ರಸ ಸ್ಪರ್ಧೆಯನ್ನು ಡಾ.ಜಿ.ಎನ್.ಮಂಜುನಾಥ್, ಎಸ್.ವೇಣುಗೋಪಾಲ್, ಆರ್.ಶಿವಕುಮಾರ್, ಚಂದ್ರಶೇಖರ್, ರಮೇಶ್, ಜಿ.ಎನ್.ನವೀನ್ ಕುಮಾರ್ ನಡೆಸಿಕೊಟ್ಟರು.