Site icon ಹರಿತಲೇಖನಿ

ದೊಡ್ಡಬಳ್ಳಾಪುರದ ಅವ್ಯವಸ್ಥೆ CMC ಸಭೆಯಲ್ಲಿ ಬಯಲು: ಸ್ವಾತಂತ್ರ್ಯ ದಿನಾಚರಣೆಯಂದು ಮಕ್ಕಳಿಗೆ ಸಿಹಿ ನೀಡಲು ಆಕ್ಷೇಪ..!

Channel Gowda
Hukukudi trust

ದೊಡ್ಡಬಳ್ಳಾಪುರ: ನಗರಸಭೆ(CMC) ನೂತನ ಅಧ್ಯಕ್ಷೆ ಕೆ.ಸುಮಿತ್ರಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮೊದಲ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಖಾಸಗಿ ಶಾಲೆ ಎಂಬ ಕಾರಣಕ್ಕೆ ಮಕ್ಕಳಿಗೆ ಸಿಹಿ ನೀಡಲು ಆಕ್ಷೇಪ, ನಗರಸಭೆಗೆ ಬರಬೇಕಿರುವ ವಿವಿಧ ತೆರಿಗೆ, ಕಂದಾಯ ಬಾಕಿ ವಸೂಲಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ವಿಷಯದ ಮೇಲೆ ಚರ್ಚೆ ನಡೆಸಿದ ಪ್ರಸಂಗ ನಡೆಯಿತು.

Aravind, BLN Swamy, Lingapura

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳ ಖರ್ಚುಗಳನ್ನು ನಗರಸಭೆ ವತಿಯಿಂದಲೇ ಭರಿಸುವ ಹೊಸ ಸಂಪ್ರದಾಯ ಪ್ರಾರಂಭವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು.

ನಗರದಲ್ಲಿ ಸರ್ಕಾರದ ಇತರೆ ಇಲಾಖೆಗಳು ಇವೆ. ಎಲ್ಲಾ ಇಲಾಖೆಗಳಿಗೆ ಖರ್ಚುಗಳನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ವರ್ಷವು ಸಿಹಿ ತಿಂಡಿಯನ್ನು ನೀಡಲಾಗುತ್ತದೆ. ಆದರೆ ಪೋಷಕರಿಂದ ಸಾವಿರಾರು ರೂಪಾಯಿ ಶುಲ್ಕ ವಸೂಲಿ ಮಾಡುವ ಖಾಸಗಿ ಶಾಲೆಗಳಿಗು ಸಿಹಿ ವಿತರಣೆ ಮಾಡುವುದು ಸೂಕ್ತ ನಿರ್ಧಾರ ಅಲ್ಲ ಎಂದು ನಗರಸಭೆ ಸದಸ್ಯರಾದ ಟಿ.ಎನ್ ಪ್ರಭುದೇವ್, ವಡ್ಡರಹಳ್ಳಿ ರವಿಕುಮಾರ್, ಪದ್ಮನಾಭ ಆಕ್ಷೇಪ ವ್ಯಕ್ತಪಡಿಸಿದರು.

Aravind, BLN Swamy, Lingapura

ಈ ಆಕ್ಷೇಪಕ್ಕೆ ಬೇಸರ ವ್ಯಕ್ತಪಡಿಸಿದ ನಗರಸಭೆ ಸದಸ್ಯ ಭಾಸ್ಕರ್, ಶಿವಶಂಕರ್ ಮಕ್ಕಳು ಎಂದರೆ ಎಲ್ಲರೂ ಒಂದೇ, ನಮ್ಮ ನಗರಸಭೆಯ ಅನೇಕ ಸದಸ್ಯರ ಮಕ್ಕಳು ವ್ಯಾಸಂಗ ಮಾಡ್ತಾ ಇರೋದು ಖಾಸಗಿ ಶಾಲೆಯಲ್ಲಿಯೇ ಎಂಬುದನ್ನು ಮರೆಯಬೇಡಿ ಎಂದರು.

ಹಿರಿಯ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ನಗರದ ಕೋಟೆ ರಸ್ತೆ, ಸೌಂದರ್ಯ ಮಹಲ್ ಚಿತ್ರ ಮಂದಿರ ಸಮೀಪದ ವಕ್ಫ್ ಅಧಿನದಲ್ಲಿ ಇರುವ ವಾಣಿಜ್ಯ ಮಳಿಗೆಗಳಿಂದ ನಗರಸಭೆಗೆ ಪಾವತಿಸಬೇಕಿರುವ ಲಕ್ಷಾಂತರ ರೂಪಾಯಿ ತೆರಿಗೆ ಬಾಕಿ ಇದೆ. ಹಾಗೆಯೇ ಚಿತ್ರಮಂದಿರ, ಕಲ್ಯಾಣ ಮಂದಿರ, ಪಾರ್ಟಿ ಹಾಲ್, ಪೆಟ್ರೋಲ್ ಬಂಕ್ಗಳ ಮಾಲೀಕರು ಉಳಿಸಿಕೊಂಡಿರುವ ತೆರಿಗೆ ಬಾಕಿ ವಸೂಲಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಹತ್ತಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಕುಂಟು ನೆಪಗಳನ್ನು ಹೇಳುತ್ತಲೇ ಕಾಲಾಹಣ ಮಾಡಲಾಗುತ್ತಿದೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಬೃಹತ್ ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮನೆಗಳನ್ನು ವಾಣಿಜ್ಯ ಮಳಿಗೆಗಳಾಗಿ ಪರಿವರ್ತಿಸಲಾಗಿದೆ. ಆದರೆ ನಗರದಲ್ಲಿ ಎಷ್ಟು ವಾಣಿಜ್ಯ ಮಳಿಗೆಗಳು ಇವೆ ಎನ್ನುವ ನಿಖಿರವಾದ ಮಾಹಿತಿಯೇ ನಗರಸಭೆಯಲ್ಲಿ ಇಲ್ಲದಾಗಿದೆ. ಹೀಗಾದರೆ ತೆರಿಗೆ ವಸೂಲಿ ಮಾಡುವುದಾದರು ಹೇಗೆ, ನಗರದ ಅಭಿವೃದ್ದಿಗೆ ಹಣ ಕ್ರೂಢೀಕರಿಸುವುದಾದರು ಹೇಗೆ ಎಂದು ಪ್ರಶ್ನಿಸಿದರು. ಮುಂದಿನ ಸಾಮಾನ್ಯ ಸಭೆಯ ವೇಳೆಗೆ ನಗರದಲ್ಲಿನ ವಾಣಿಜ್ಯ ಮಳಿಗೆಗಳ ಸಮೀಪಕ್ಷೆ ನಡೆಸಿ ಅಧಿಕೃತ ಪಟ್ಟಿಯನ್ನು ಸಭೆಯ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಸದಸ್ಯರಾದ ಎಚ್.ಎಸ್.ಶಿವಶಂಕರ್, ಟಿ.ಎನ್.ಪ್ರಭುದೇವ ಮಾತನಾಡಿ, ನಗರಸಭೆಗೆ ಮುಖ್ಯ ಆದಾಯದ ಮೂಲಗಳಲ್ಲಿ ಒಂದಾಗಿದ್ದ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಸೇರಿದಂತೆ ನಗರದ ವಿವಿಧೆಡೆಗಳಲ್ಲಿನ ಸುಮಾರು 40 ವಾಣಿಜ್ಯ ಮಳಿಗೆಗಳು ಎರಡು ವರ್ಷಗಳಿಂದಲು ಖಾಲಿ ಉಳಿದಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಹರಾಜು ಪ್ರಕ್ರಿಯೆ ನಡೆಸುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಶುಲ್ಕ ವಸೂಲಿಯಲ್ಲಿ ಶೇ 10ರಷ್ಟು ಪ್ರಗತಿಯಾಗಿಲ್ಲ. ₹8 ಕೋಟಿ ನೀರಿನ ಶುಲ್ಕ ಭಾಕಿ ಇದೆ. ಆದರೆ ವಸೂಲಿಯಾಗಿರುವುದು ಕೇವಲ ₹1 ಕೋಟಿ. ವಾರ್ಷಿಕ ನೀರಿನ ಶುಲ್ಕ ₹2.87 ಕೋಟಿ ವಸೂಲಿಯಾಗಬೇಕು ಎನ್ನುವ ಅಂಕಿಅಂಶ ಇದೆ. ಆದರೆ ವಾಸ್ತವ ಲೆಕ್ಕದಲ್ಲಿ ₹1 ಕೋಟಿ ತೋರಿಸಲಾಗಿದೆ ಎಂದು ದೂರಿದರು.

ಕಟ್ಟಡ ಪರವಾನಗಿಯೇ ಪಡೆಯುತ್ತಿಲ್ಲ

ನಗರದ ವ್ಯಾಪ್ತಿಲ್ಲಿ ಅಭಿವೃದ್ದಿ ಪ್ರಾಧಿಕಾರದಿಂದ ಅನುಮೋದಿತವಾಗಿರುವ 20 ಬಡಾವಣೆಗಳು ಇವೆ. ನಗರದ ಒಳ ಭಾಗವು ಸೇರಿದಂತೆ ಹೊಸ ಬಡಾವಣೆಗಳಲ್ಲಿ ನೂರಾರು ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಆದರೆ ಏಪ್ರಿಲ್ ನಿಂದ ಇಲ್ಲಿಯವರೆಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಲ್ಲಿಕೆಯಾಗಿರುವ ಅರ್ಜಿಗಳು 103. ಇವುಗಳ ಪೈಕಿ 25 ಅರ್ಜಿಗಳಿಗೆ ನಗರಸಭೆಯಿಂದ ಅನುಮೋದನೆ ದೊರೆತಿವೆ.

ಕಟ್ಟಡ ಪರವಾನಿಗಿ ಶುಲ್ಕ ₹1ಲಕ್ಷ ಸಂಗ್ರಹವಾಗಿದೆ. ನಗರಸಭೆಯಿಂದ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸೌಲಭ್ಯ, ಬೀದಿ ದೀಪ, ರಸ್ತೆ, ಕಸ ಗುಡಿಸುವುದು ಸೇರಿದಂತೆ ಎಲ್ಲಾ ಸೌಕರ್ಯಗಳು ನೀಡಬೇಕು. ಆದರೆ ಪರವಾನಗಿ ಮಾತ್ರ ಪಡೆಯದೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದರು ಸಹ ಮಾಲೀಕರನ್ನು ಅಧಿಕಾರಿಗಳು ಪ್ರಶ್ನಿಸದೇ ಇದ್ದರೆ ನಗರಸಭೆ ಆಡಳಿತ ನಡೆಯುವುದಾದರು ಹೇಗೆ, ಅಧಿಕಾರಿಗಳಿಗೆ ಸಂಬಳ ಏಕೆ ನೀಡಬೇಕು ಎಂದು ಸದಸ್ಯರಾದ ಶಿವಣ್ಣ, ವಿ.ಎಸ್.ರವಿಕುಮಾರ್, ಆನಂದ್, ಸುಬ್ಬು ಪ್ರಶ್ನಿಸಿದರು.

ಸದಸ್ಯರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಪೌರಾಯುಕ್ತ ಕಾರ್ತೀಕ ಈಶ್ವರ್, ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಕೆಲವು ವಾಣಿಜ್ಯ ಮಳೆಗಳ ಬಾಡಿಗೆ ವಿವಾದ ನ್ಯಾಯಲಯದಲ್ಲಿ ಇವೆ. ಯಾವುದೇ ವಿವಾದ ಇಲ್ಲದ ಮಳಿಗೆಗಳ ಹರಾಜು ಪ್ರಕ್ರಿಯೆ ಇದೇ ಪ್ರಥಮ ಬಾರಿಗೆ ಇ-ಟೆಂಡರ್ ಮೂಲಕ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಸೇರಿದಂತೆ ಎಲ್ಲವನ್ನು ಆನ್ ಲೈನ್ ಮಾಡಲಾಗುತ್ತಿದೆ. ಇದರಿಂದ ತೆರಿಗೆ ವಸೂಲಿ ಸರಳವಾಗಲಿದೆ ಎಂದರು.

ನಗರೋತ್ತಾನ ನಿಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಗುತ್ತಿಗೆ ವಿಳಂಭವಾಗುತ್ತಿರುವ ಕುರಿತು ಗುತ್ತಿಗೆದಾರೊಂದಿಗೆ ಸಭೆ ನಡೆಸಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಇದ್ದರೆ ಗುತ್ತಿಗೆ ರದ್ದು ಮಾಡಲಾಗುವುದು.

ತೆರಿಗೆ ವಸೂಲಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಈಗ ಮಾಸಿಕ ಪ್ರಗತಿ ಶೇ 60 ರಿಂದ 70 ಇದೆ. ಡಿಸೆಂಬರ್ ಅಂತ್ಯಕ್ಕೆ ಶೇ 90 ರಷ್ಟು ಗುರಿ ಮುಟ್ಟವ ಉದ್ದೇಶ ಹೊಂದಲಾಗಿದೆ. ಕಟ್ಟಡ ನಿರ್ಮಾಣ ಪರವಾನಿಗಿ ನೀಡಲು ಸರ್ಕಾರದ ನಿಯಮಗಳು ಕಠಿಣವಾಗಿವೆ. ಈ ನಿಯಮದ ಪ್ರಕಾರವೇ ಪರವಾನಿಗಿ ನೀಡಬೇಕು. ಹಾಗಾಗಿಯೇ ಸಾರ್ವಜನಿಕರು ಪರವಾನಗಿ ಪಡೆಯದೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇಂತಹವರಿಗೆ ನೋಟಿಸ್ ನೀಡಲಾಗುತ್ತಿದೆ.

ನಗರಸಭೆಯಿಂದ ನೋಟಿಸ್ ನೀಡುತ್ತಿದ್ದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಹಾಗಾಗಿ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಕಟ್ಟಡ ನಿರ್ಮಾಣವಾದ ನಂತರ ಎರಡು ಪಟ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಮಲ್ಲೇಶ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಇದ್ದರು.

Exit mobile version